ಬೆಂಗಳೂರು: ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಆಯ್ಕೆ ಮಾಡುವ ಸಂದರ್ಭದಲ್ಲಿ ಹೈಕಮಾಂಡ್ ಜೊತೆ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ಇಂದು ಸಿಎಂ ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ.
ಆಂಗ್ಲ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್, ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಅಧಿಕಾರಕ್ಕೇರಿದ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಹೈಕಮಾಂಡ್ ಜೊತೆ ಒಪ್ಪಂದವಾಗಿತ್ತು. ಆದರೆ ಒಪ್ಪಂದದ ಬಗ್ಗೆ ಬಹಿರಂಗಪಡಿಸಲಾಗದು ಎಂದಿದ್ದರು.
ಸಿದ್ದರಾಮಯ್ಯ ಬಳಿಕ ಡಿಕೆ ಶಿವಕುಮಾರ್ ಗೆ ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಡುವ ಬಗ್ಗೆ ಹಂಚಿಕೆಯಾಗಿತ್ತು ಎಂದು ಅವರು ಪರೋಕ್ಷವಾಗಿಯೇ ಹೇಳಿಕೊಂಡಿದ್ದರು. ಆದರೆ ಡಿಕೆಶಿ ಹೇಳಿಕೆಗೆ ಇಂದು ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಮಂಡ್ಯದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಯಾವ ಒಪ್ಪಂದ? ನಮ್ಮ ನಡುವೆ ಯಾವ ಒಪ್ಪಂದವೂ ಆಗಿಲ್ಲ. ಹೈಕಮಾಂಡ್ ಮಾತಿನಂತೇ ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
ಹಾಸನದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರಿನಲ್ಲಿ ಸಮಾವೇಶ ನಡೆಸಲು ತಯಾರಿ ನಡೆದಿತ್ತು. ಆದರೆ ಇದಕ್ಕೆ ಅಪಸ್ವರ ಬಂದ ಬೆನ್ನಲ್ಲೇ ಇದನ್ನು ಕಾಂಗ್ರೆಸ್ ಸಮಾವೇಶವಾಗಿ ಬದಲಾಯಿಸಲಾಯಿತು. ಇದರ ಮಧ್ಯೆಯೇ ಡಿಕೆ ಶಿವಕುಮಾರ್ ಅಧಿಕಾರ ಹಂಚಿಕೆ ಕುರಿತು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.