ಬೆಂಗಳೂರು: ಕ್ರೀಡಾ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಕರ್ನಾಟಕ ಒಲಂಪಿಕ್ ಸಂಸ್ಥೆ ಯವನಿಕಾದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ತರಬೇತಿ, ಪಂದ್ಯಗಳು ಎಂದು ಹೆಚ್ಚು ಸಮಯ ಹೊರಗೇ ಕಾಲ ಕಳೆಯಬೇಕಾಗುತ್ತದೆ. ಇದರಿಂದ ಎಷ್ಟೋ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಹಾಳಾಗುತ್ತದೆ. ಹೀಗಾಗಿ ಕ್ರೀಡಾ ವಿದ್ಯಾರ್ಥಿಗಳಿಗೆ ಹಾಜರಾತಿ ವಿನಾಯ್ತಿ ನೀಡಬೇಕು ಎಂದು ಬಹುದಿನಗಳ ಬೇಡಿಕೆಯಾಗಿದೆ.
ಈ ಬಗ್ಗೆ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಒಲಂಪಿಕ್ ಸಂಸ್ಥೆ ಅಧ್ಯಕ್ಷರಾದ ಗೋವಿಂದರಾಜು ಅವರು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. ಶಾಲಾ ಮಕ್ಕಳು ಕ್ರೀಡೆಯಲ್ಲಿ ಹೆಚ್ಚೆಚ್ಚು ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಕ್ರೀಡಾ ಮಕ್ಕಳಿಗೆ ಶೇ25 ರಷ್ಡು ಹಾಜರಾತಿ ಮತ್ತು 10 ಗ್ರೇಸ್ ಮಾರ್ಕ್ ನೀಡುವಂತೆ ನಿಯಮ ರೂಪಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಇದಕಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ ಈ ಬೇಡಿಕೆಗಳು ನ್ಯಾಯೋಚಿತವಾಗಿವೆ. ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಸಭೆಯಲ್ಲಿ ಮಾತನಾಡಿದ್ದ ಸಿಎಂ, ಕರ್ನಾಟಕದ ಕ್ರೀಡಾಳುಗಳಿಗೆ ಎಲ್ಲಾ ನೆರವು ನೀಡುವುದಾಗಿ ಘೋಷಿಸಿದ್ದರು.