ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಹೆಸರಿನಲ್ಲಿ ಮುಡಾ ಸೈಟು ನೀಡಿದ್ದ ಪ್ರಕ್ರಿಯೆಯೇ ಅಕ್ರಮ ಎಂದು ಜಾರಿ ನಿರ್ದೇಶನಾಲಯ ಹೇಳಿದ್ದು, ಸಿಎಂಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಮುಡಾದಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂ. ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಈ ಪೈಕಿ ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿ ನೀಡಿದ ಸೈಟುಗಳೂ ಸೇರಿವೆ. ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಇಡಿ ಮುಡಾದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವಿವರ ನೀಡಿದೆ.
ಸಿಎಂ ಪತ್ನಿ ಪಾರ್ವತಿ ಹೆಸರಿನಲ್ಲಿದ್ದ ಮೂರೂವರೆ ಎಕರೆ ಸೈಟಿಗೆ ಬದಲಾಗಿ ಮುಡಾ ನೀಡಿದ್ದ 14 ಸೈಟುಗಳನ್ನು ನೀಡಿತ್ತು. ಸಿಎಂ ಬಾಮೈದನಿಗೆ ಜಮೀನು ನೀಡಿದ್ದ ದೇವರಾಜು ನಡೆಯೇ ಅನುಮಾನಸ್ಪದವಾಗಿದೆ. ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿಯೂ ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ದೇವನೂರು ಬಡಾವಣೆಯಲ್ಲೇ 352 ಸೈಟುಗಳು ಖಾಲಿಯಿದ್ದರೂ ಅಲ್ಲಿ 60:40 ಅನುಪಾತದಲ್ಲಿ ನೀಡದೇ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 14 ಸೈಟುಗಳನ್ನು ಮುಡಾ ನೀಡಿತ್ತು. ಇದರಿಂದ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ ಎಂದು ಇಡಿ ವರದಿ ಹೇಳಿದೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಪಾತ್ರದ ಕುರಿತು ಈಗಾಗಲೇ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮುಡಾದಲ್ಲಿ ನಡೆದಿರುವ ಸಾವಿರಾರು ಕೋಟಿ ರೂ. ಭ್ರಷ್ಟಾಚಾರದ ಬಗ್ಗೆ ಇಡಿ ಇಲಾಖೆ ತನಿಖೆ ನಡೆಸುತ್ತಿದೆ. ಇದೀಗ ತನಿಖಾ ಪ್ರಗತಿ ಬಗ್ಗೆ ಲೋಕಾಯುಕ್ತಗೆ ಇಡಿ ಮಾಹಿತಿ ನೀಡಿದೆ.