ಹೈದರಾಬಾದ್: ತೆಲಂಗಾಣದಲ್ಲಿ ಇಂದು ಬೆಳಿಗ್ಗೆ 7.27 ರ ಸುಮಾರಿಗೆ 5.3 ತೀವ್ರತೆಯ ಪ್ರಬಲ ಭೂಕಂಪವಾಗಿದ್ದು, ಭೂಕಂಪನದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಬಲ ಭೂಕಂಪ ಸಂಭವಿಸಿದೆ ಎನ್ನಲಾಗಿದೆ. ಮುಲುಗುವನ್ನು ಕೇಂದ್ರಬಿಂದು ಎಂದು ಗುರುತಿಸಲಾಗಿದ್ದು, ತೆಲಂಗಾಣ ಮಾತ್ರವಲ್ಲದೆ, ಹೈದರಾಬಾದ್ ನ ಗೋದಾವರಿ ನದಿ ಸುತ್ತಮುತ್ತಲೂ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಮುಲುಗು ಮತ್ತು ಹೈದರಾಬಾದ್ ಸುತ್ತಮುತ್ತಲ ನಿವಾಸಿಗಳಿಗೆ ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಸಿಸಿಟಿವಿ ಕ್ಯಾಮರಾಗಳಲ್ಲಿ ಭೂಕಂಪನದ ದೃಶ್ಯ ಸೆರೆಯಾಗಿದ್ದು, ಹಲವರು ಇದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮೊದಲು ಮುಲುಗು ಮತ್ತು ಹೈದರಾಬಾದ್ ಸೇರಿದಂತೆ ಇಡೀ ತೆಲಂಗಾಣದಲ್ಲಿ ಭೂಕಂಪಿಸಿದೆ. ಬಳಿಕ ಗೋದಾವರಿ ನದಿ ಸುತ್ತಮುತ್ತಲ ಪರಿಸರದಲ್ಲಿ ಎರಡನೇ ಬಾರಿಗೆ ಭೂಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 5.3 ರಷ್ಟಿತ್ತು ಎಂದು ಪತ್ತೆಯಾಗಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅನಾಹುತವಾಗಿಲ್ಲ.