ಮಹಾರಾಷ್ಟ್ರದ ನಿರ್ಗಮಿತ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಆರೋಗ್ಯದಲ್ಲಿ ಮತ್ತೇ ಏರುಪೇರಾದ ಹಿನ್ನೆಲೆ ಅವರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಯಿತು. ಮೂಲಗಳ ಪ್ರಕಾರ, ವೈದ್ಯರು ಏಕನಾಥ್ ಶಿಂಧೆ ಅವರ ಆರೋಗ್ಯದ ಸಂಪೂರ್ಣ ಪರೀಕ್ಷೆಗೆ ಸಲಹೆ ನೀಡಿದ್ದರು. ಕಳೆದೊಂದು ವಾರದಿಂದ ಗಂಟಲು ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದರು.
ಮಹಾರಾಷ್ಟ್ರ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಾಣದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಥಾಣೆಯ ಜುಪಿಟರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಶಿವಸೇನಾ ಮುಖ್ಯಸ್ಥರು ತಮ್ಮ ಅಧಿಕೃತ ನಿವಾಸ ವರ್ಷಾವನ್ನು ತಲುಪಿದರು. ಮಂಗಳವಾರ ಬೆಳಿಗ್ಗೆ ಅವರನ್ನು "ಸಾಮಾನ್ಯ ತಪಾಸಣೆ" ಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗಿದೆ.
ಹೊಸ ಸರ್ಕಾರ ರಚನೆಯಾಗುತ್ತಿರುವ ರೀತಿಯಿಂದ ಸಂತೋಷವಾಗಿಲ್ಲ ಎಂಬ ಊಹಾಪೋಹಗಳ ನಡುವೆ ಶಿವಸೇನಾ ನಾಯಕ ಕಳೆದ ಶುಕ್ರವಾರ ಸತಾರಾ ಜಿಲ್ಲೆಯ ತಮ್ಮ ಗ್ರಾಮಕ್ಕೆ ತೆರಳಿದ್ದರು. ಅಲ್ಲಿ ಅವರಿಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಇದೀಗ ಮತ್ತೇ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಇಂದು ತಪಾಸಣೆ ಮಾಡಿ, ಡಿಸ್ಚಾರ್ಜ್ ಮಾಡಲಾಗಿದೆ.
ಮುಂಬೈನ ಆಜಾದ್ ಮೈದಾನದಲ್ಲಿ ಸಂಭ್ರಮ ಮನೆ ಮಾಡಿದ್ದು, ಡಿಸೆಂಬರ್ 5 ರಂದು ಮಹಾರಾಷ್ಟ್ರದ ಹೊಸ ಮಹಾಯುತಿ ಸರ್ಕಾರದ ಬಹು ನಿರೀಕ್ಷಿತ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭವನ್ನು ಅಲಂಕರಿಸಲು ಸಜ್ಜಾಗಿದ್ದಾರೆ.