ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಇಂದು ಕೆಪಿಎಸ್ ಸಿ ಹಗರಣದ ಬಗ್ಗೆ ಮಾತನಾಡಲು ಹೋಗಿ ಸಿಎಂ ಸಿದ್ದರಾಮಯ್ಯ ಇಂದು ಕೆಪಿಸಿಸಿ ಹಗರಣ ಎಂದು ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.
ಸದನದಲ್ಲಿ ಇಂದು ಕಲಾಪ ನಡೆಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ಕೆಪಿಎಸ್ ಸಿ ಹಗರಣದ ಬಗ್ಗೆ ಮಾತನಾಡಲು ಆರಂಭಿಸಿದ್ದರು. ಈ ವೇಳೆ ಕರ್ನಾಟಕ ಲೋಕಸೇವಾ ಆಯೋಗ ಕೆಪಿಎಸ್ ಸಿ ಎನ್ನುವ ಬದಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕೆಪಿಸಿಸಿ ಎಂದು ತಪ್ಪಾಗಿ ಹೇಳಿದರು.
ಇದನ್ನೇ ಇಟ್ಟುಕೊಂಡು ಸಿಎಂ ಸಿದ್ದರಾಮಯ್ಯರನ್ನು ವಿಪಕ್ಷ ಬಿಜೆಪಿ ಸದಸ್ಯರು ಕಾಲೆಳೆದರು. ಸಿದ್ದರಾಮಯ್ಯನವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕೆಂದುಕೊಂಡಿದ್ದಾರೆ. ಅದನ್ನೇ ತಲೆಯಲ್ಲಿಟ್ಟುಕೊಂಡಿರುವ ಕಾರಣ ಕೆಪಿಸಿಸಿ ಎಂದೇ ಬರುತ್ತಿದೆ ಎಂದು ಬಿಜೆಪಿ ಸದಸ್ಯರು ಕಾಲೆಳೆದರು. ಈ ವೇಳೆ ಕೊಂಚ ಗದ್ದಲವೇರ್ಪಟ್ಟಿತು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್ ಏನೋ ಬಾಯ್ತಪ್ಪಿ ಒಂದು ಅಕ್ಷರ ತಪ್ಪಾಯ್ತು. ಅದನ್ನೇ ಇಟ್ಟುಕೊಂಡು ಚರ್ಚೆ ಮಾಡಬೇಕಾ? ಮೊದಲೇ ಸಮಯವಿಲ್ಲ, ನೀವು ಮುಂದುವರಿಸಿ ಎಂದು ಸಿಎಂಗೆ ಮಾತು ಮುಂದುವರಿಸಲು ಸೂಚಿಸಿದರು.