ಕಳೆದ ವಾರ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯುವವರೆಗೂ ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ. ಬೆಳಗ್ಗೆ ನಮ್ಮ ಮನೆಯ ಬಾತ್ರೂಂನಲ್ಲೇ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೆ ಎಂದು ಆಕೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ.ತಾಯಿಯೊಬ್ಬಳು ತನಗೆ ಬೇಡವಾದ ಮಗುವನ್ನು ನ್ಯೂ ಮೆಕ್ಸಿಕೋದ ಸ್ಟೋರ್ನ ಹೊರಗೆ ಇರುವ ಕಸದ ತೊಟ್ಟಿಗೆ ಎಸೆದಿರುವ ವಿಡಿಯೋಗಳು ಎಲ್ಲೆಡೆ ವೈರಲ್ ಆಗಿವೆ. ಆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಅಪ್ರಾಪ್ತೆಯಾಗಿದ್ದ ಯುವತಿ ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಆ ಮಗುವನ್ನು ಸಾಕಲು ಸಾಧ್ಯವಾಗದ ಕಾರಣ ಮತ್ತು ಆ ಮಗುವನ್ನು ಆಕೆಯ ಹೆತ್ತವರು ಒಪ್ಪಿಕೊಳ್ಳದ ಕಾರಣದಿಂದ ತನ್ನ ನವಜಾತ ಶಿಶುವನ್ನು ಆಕೆ ಕಸದ ತೊಟ್ಟಿಗೆ ಹಾಕಿದ್ದಾಳೆ. ವಿಷಯ ಗೊತ್ತಾದ ಕೂಡಲೆ ಆ ಮಗುವನ್ನು ರಕ್ಷಿಸಲಾಗಿದೆ.
ವೈರಲ್ ಆಗಿರುವ ವೀಡಿಯೋದಲ್ಲಿ ಮಹಿಳೆಯೊಬ್ಬರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಬಿಳಿ ಕಾರಿನಲ್ಲಿ ಬಂದು, ಹಿಂದಿನ ಸೀಟಿನಿಂದ ಕಪ್ಪು ಚೀಲವನ್ನು ತೆಗೆದು ಕಸದ ತೊಟ್ಟಿಗೆ ಎಸೆದು ವಾಪಾಸ್ ಕಾರಿನಲ್ಲಿ ಹೋಗಿರುವುದು ದಾಖಲಾಗಿದೆ. ಆ ಕಪ್ಪು ಚೀಲದೊಳಗೆ ಆಗ ತಾನೇ ಹುಟ್ಟಿದ್ದ ಮಗುವಿತ್ತು. ಈ ಘಟನೆ ನಡೆದು ಸುಮಾರು ಆರು ಗಂಟೆಗಳ ನಂತರ ಕೆಲವು ಜನರ ಗುಂಪು ಬಂದು ಆ ಕಸದ ಬುಟ್ಟಿಯಲ್ಲಿದ್ದ ಚೀಲವನ್ನು ಎತ್ತಿ ನೋಡಿದೆ. ಅವರಲ್ಲಿ ಕೆಲವರು ಆ ಚೀಲವನ್ನು ಬಿಚ್ಚಿದಾಗ ಮಗು ಇರುವುದು ಗೊತ್ತಾಗಿದೆ. ಅಳುತ್ತಿದ್ದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆ ದಾರಿಯಲ್ಲಿ ಬರುತ್ತಿದ್ದ ಕಾರ್ಮಿಕರು ದೊಡ್ಡದಾದ ಕಸದ ಬುಟ್ಟಿಯಲ್ಲಿ ತಮಗೆ ಏನಾದರೂ ಉಪಯೋಗಕ್ಕೆ ಬರುವಂಥದು ಸಿಗಬಹುದು ಎಂದು ಜಾಲಾಡಿದ್ದಾರೆ. ಆಗ ಚೀಲದೊಳಗಿಂದ ಶಬ್ದ ಕೇಳಿದ್ದರಿಂದ ಆ ಚೀಲವನ್ನು ತೆರೆದು ನೋಡಿದ್ದಾರೆ. ಅದರೊಳಗೆ ಆ ದಿನವೇ ಹುಟ್ಟಿದ ಗಂಡು ಮಗುವಿತ್ತು. ಒಣಗಿದ ರಕ್ತದಿಂದ ಕೂಡಿದ್ದ ಟವೆಲ್ನಲ್ಲಿ ಸುತ್ತಿ ಮಗುವನ್ನು ಕವರ್ನಲ್ಲಿ ಕಟ್ಟಲಾಗಿತ್ತು.
ಏನೋ ಶಬ್ದ ಬರುತ್ತಿರುವುದನ್ನು ನೋಡಿದ ಅವರು ಮೊದಲು ಆ ಕವರ್ನಲ್ಲಿರುವುದು ಬೆಕ್ಕಿನ ಮರಿ ಇರಬಹುದು ಎಂದು ಭಾವಿಸಿದ್ದರು. ಆದರೆ ಅವರು ಚೀಲವನ್ನು ಎತ್ತಿಕೊಂಡ ತಕ್ಷಣ ಅದು ತುಂಬಾ ಭಾರವಾಗಿತ್ತು. ತೆರೆದು ನೋಡಿದಾಗ ಮಗುವನ್ನು ನೋಡಿ ಅವರು ಆಘಾತಕ್ಕೀಡಾದರು. ಕೊನೆಗೆ ಆ ತಾಯಿಯನ್ನು ಹುಡುಕಿ ಮಗುವನ್ನು ಸುರಕ್ಷಿತವಾಗಿ ಆಕೆಗೆ ನೀಡಲಾಯಿತು.
ಹಾಗೇ, ವೀಡಿಯೊವನ್ನು ಪರಿಶೀಲಿಸಿದ ನಂತರ 17 ವರ್ಷದ ಆ ಯುವತಿ (ಮಗುವಿನ ತಾಯಿ) ವಿರುದ್ಧ ಕೊಲೆ ಯತ್ನ ಮತ್ತು ಮಕ್ಕಳ ನಿಂದನೆ ಆರೋಪದಡಿ ಕೇಸ್ ದಾಖಲಿಸಲಾಗಿದೆ. ಆಕೆ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ. ಕಳೆದ ವಾರ ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯುವವರೆಗೂ ತಾನು ಗರ್ಭಿಣಿ ಎಂದು ತಿಳಿದಿರಲಿಲ್ಲ ಎಂದು ಆಕೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ. ಇಂದು ಬೆಳಗ್ಗೆ ನಮ್ಮ ಮನೆಯ ಬಾತ್ರೂಂನಲ್ಲೇ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೆ. ಈ ವಿಷಯ ಗೊತ್ತಾದ ಕೂಡಲೆ ನಮ್ಮ ಮನೆಯವರು ಗಲಾಟೆ ಮಾಡಿದರು. ಇದರಿಂದ ಭಯವಾಗಿ ಮಗುವನ್ನು ಕಸದ ತೊಟ್ಟಿಗೆ ಎಸೆದೆ ಎಂದು ಆಕೆ ಹೇಳಿದ್ದಾಳೆ.