Select Your Language

Notifications

webdunia
webdunia
webdunia
webdunia

ಬೈ ಎಲೆಕ್ಷನ್ ಸೋಲಿನ ಬಳಿಕ ಕುಮಾರಸ್ವಾಮಿ ಜೊತೆಗಿನ ಬಾಂಧವ್ಯಕ್ಕೆ ಬಿಜೆಪಿ ಬೈ ಬೈ

HD Kumaraswamy

Krishnaveni K

ಬೆಂಗಳೂರು , ಶನಿವಾರ, 23 ನವೆಂಬರ್ 2024 (12:12 IST)
ಬೆಂಗಳೂರು: ಕರ್ನಾಟಕದಲ್ಲಿ ಈ ಬಾರಿ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿನತ್ತ ಮುಖ ಮಾಡಿದ್ದು, ಈ ಚುನಾವಣೆ ಫಲಿತಾಂಶದ ಬಳಿಕ ಜೆಡಿಎಸ್ ಜೊತೆಗಿನ ಮೈತ್ರಿಗೆ ಬಿಜೆಪಿ ನಾಯಕರಲ್ಲೇ ಭಿನ್ನಮತ ಏಳುವುದು ಖಚಿತವಾಗಿದೆ.

ಚನ್ನಪಟ್ಟಣದಲ್ಲಿ ಈ ಬಾರಿ ಎನ್ ಡಿಎ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬೇಕು ಎಂಬುದು ರಾಜ್ಯ ಬಿಜೆಪಿ ನಾಯಕರ ಒತ್ತಾಸೆಯಾಗಿತ್ತು. ಯೋಗೇಶ್ವರ್ ಕೂಡಾ ಕೊನೇ ಕ್ಷಣದವರೆಗೂ ಬಿಜೆಪಿ ಹೈಕಮಾಂಡ್ ಮೂಲಕ ಲಾಬಿ ನಡೆಸಲು ಪ್ರಯತ್ನಿಸಿದ್ದರು.

ಆದರೆ ಇದು ಕುಮಾರಸ್ವಾಮಿಯವರಿಂದ ತೆರವಾಗುತ್ತಿರುವ ಸ್ಥಾನವಾಗಿತ್ತು. ಜೊತೆಗೆ ಇಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಹೀಗಾಗಿ ಕುಮಾರಸ್ವಾಮಿಯನ್ನು ಎದುರು ಹಾಕಿಕೊಂಡು ಯೋಗೇಶ್ವರ್ ರನ್ನು ಕಣಕ್ಕಿಳಿಸುವುದು ಬಿಜೆಪಿಗೆ ಸಾಧ್ಯವಿರಲಿಲ್ಲ. ಕೊನೆಗೂ ಕುಮಾರಸ್ವಾಮಿ ಪಟ್ಟು ಹಿಡಿದಂತೆ ಮಗನಿಗೇ ಟಿಕೆಟ್ ಕೊಡಿಸಿದರು.

ಆದರೆ ಈಗ ಅದುವೇ ಎನ್ ಡಿಎ ಅಭ್ಯರ್ಥಿ ಸೋಲಿಗೆ ಕಾರಣವಾಗಿದೆ. ನಿಖಿಲ್ ನನ್ನು ಒಬ್ಬ ನಾಯಕನಾಗಿ ಜನ ಒಪ್ಪಿಕೊಳ್ಳಲು ತಯಾರಿಲ್ಲ ಎನ್ನುವುದು ಈ ಹಿಂದೆ ನಡೆದ ಎರಡು ಚುನಾವಣೆಗಳಲ್ಲಿ ಖಚಿತವಾಗಿದೆ. ಹಾಗಿದ್ದರೂ ಕುಮಾರಸ್ವಾಮಿ ಪಟ್ಟು ಬಿಡದೇ ಮೂರನೇ ಬಾರಿಗೆ ಮಗನನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದರು.

ಒಂದು ವೇಳೆ ಈ ಕ್ಷೇತ್ರದಲ್ಲಿ ನಿಖಿಲ್ ಗೆದ್ದರೆ ಅವರನ್ನೇ ಜೆಡಿಎಸ್ ನ ರಾಜ್ಯ ನಾಯಕನಾಗಿ ಮಾಡಲು ಕುಮಾರಸ್ವಾಮಿ ಲೆಕ್ಕಾಚಾರ ಹಾಕಿದ್ದರು. ಆದರೆ ಈಗ ಅವರ ಲೆಕ್ಕಾಚಾರ ಉಲ್ಟಾ ಆಗುವ ಲಕ್ಷಣವಿದೆ. ಇಲ್ಲಿ ನಿಖಿಲ್ ಸೋಲು ಮತ್ತೆ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಪಸ್ವರ ಕೇಳಿಬರಬಹುದು. ಬಿಜೆಪಿಯ ಯತ್ನಾಳ್ ಸೇರಿದಂತೆ ಭಿನ್ನ ನಾಯಕರು ಯೋಗೇಶ್ವರ್ ಗೆ ಟಿಕೆಟ್ ಕೊಡಬೇಕು ಎಂದು ಮೊದಲೇ ಆಗ್ರಹಿಸಿದ್ದರು. ಆದರೆ ಈಗ ಇಲ್ಲಿ ಸೋಲಾಗಿರುವುದರಿಂದ ಬಿಜೆಪಿಯ ಈ ಭಿನ್ನ ನಾಯಕರ ಆಕ್ರೋಶ ಹೆಚ್ಚಾಗಬಹುದು. ಯೋಗೇಶ್ವರ್ ಅವರೇ ಸ್ಪರ್ಧಿಸಿದ್ದರೆ ಬಿಜೆಪಿಗೆ ಒಂದು ಸ್ಥಾನವಾದರೂ ಬರುತ್ತಿತ್ತು ಎಂಬ ಅಪಸ್ವರ ಕೇಳಿಬರಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಜಮೀರ್ ಅಹ್ಮದ್ ಕರಿಯಾ ಹೇಳಿಕೆ ಇಫೆಕ್ಟ್ ಆಗಲ್ಲ ಎಂದು ಮೊದಲೇ ಹೇಳಿದ್ದೆ: ಡಿಕೆ ಸುರೇಶ್