Publish Date: Thu, 17 Oct 2024 (19:47 IST)
Updated Date: Thu, 17 Oct 2024 (19:51 IST)
ಬಿಡದಿ (ರಾಮನಗರ): ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕಷ್ಟೇ. ಟಿಕೆಟ್ ಕುರಿತು ಯಾರು, ಏನು ಬೇಕಾದರು ಹೇಳಬಹುದು.ರಾಜಕೀಯ ವಾಸ್ತವಾಂಶಗಳ ಲೆಕ್ಕಾಚಾರ ಮಾಡಿ ಎರಡೂ ಪಕ್ಷಗಳ ಹಿರಿಯ ನಾಯಕರು ಅಭ್ಯರ್ಥಿಯನ್ನು ತೀರ್ಮಾನಿಸುತ್ತೇವೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಇಂದು ಬಿಡದಿಯ ಕೇತಗಾನಹಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, 'ನಾನೇ ಎನ್‌ಡಿಎ ಅಭ್ಯರ್ಥಿ' ಎಂಬ ಬಿಜೆಪಿಯ ಸಿ.ಪಿ. ಯೋಗೇಶ್ವರ್ ಹೇಳಿಕೆ ಕುರಿತು ಅವರು ಪ್ರತಿಕ್ರಿಯಿಸಿದರು.
ಈಗಾಗಲೇ ಟಿಕೆಟ್ ವಿಚಾರವಾಗಿ ರಾಜ್ಯ ಬಿಜೆಪಿಯ ನಾಯಕರಾದ ಬಿ.ವೈ. ವಿಜಯೇಂದ್ರ ಹಾಗೂ ಆರ್. ಅಶೋಕ್ ಜೊತೆ ಮಾತನಾಡಿದ್ದೇನೆ. ಪ್ರಮುಖರು ಸೇರಿ ನಾಡಿದ್ದು ಚರ್ಚಿಸಿ ನಿರ್ಧರಿಸೋಣ ಎಂದಿದ್ದೇನೆ ಎಂದರು.
ಮೂರೂ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು ಎಂಬುದು ನಮ್ಮ ಉದ್ದೇಶ. ಹಾಗಾಗಿ, ನಮ್ಮ ಸಂಘಟನೆ ಹಾಗೂ ಪಾತ್ರ ಏನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಶಿಗ್ಗಾವಿ ಮತ್ತು ಸಂಡೂರಿನಲ್ಲಿ ನಮ್ಮ ಪಾತ್ರ ಕಡಿಮೆ ಇರಬಹುದು. ಆದರೆ, ಒಂದೊಂದು ಮತವೂ ಮುಖ್ಯವಾಗುತ್ತದೆ ಎಂದು ತಿಳಿಸಿದರು.