Publish Date: Wed, 16 Oct 2024 (17:38 IST)
Updated Date: Wed, 16 Oct 2024 (17:42 IST)
ಚನ್ನಪಟ್ಟಣ: ಕರ್ನಾಟಕ ಉಪಚುನಾವಣೆಗೆ ದಿನ ನಿಗದಿಯಾಗುತ್ತಿದ್ದ ಹಾಗೇ ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇನ್ನೂ ಹೈವೋಲ್ಟೆಜ್ ಕ್ಷೇತ್ರವಾದ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಹಾಗೂ ಎಚ್ ಡಿ ಕುಮಾರಸ್ವಾಮಿ ನಡುವೆ ಸ್ಪರ್ಧೆ ಜೋರಾಗಿ ಏರ್ಪಡುತ್ತಿದೆ.
ಇನ್ನೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ. ಟಿಕೆಟ್‌ಗಾಗಿ ನಾನು ಭಕಪಕ್ಷಿಯಂತೆ ಕಾಯುತ್ತಿದ್ದು, ಹೆಸರು ಘೋಷಣೆ ಮಾಡಿದ ಕೂಡಲೇ ನಾಮಪತ್ರ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿಕೆ ಅಚ್ಚರಿ ಮೂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳು ಸ್ವಾಭಿಮಾನಿ ಸೈನಿಕನ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಯಬೇಕೆಂದರೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕಿದೆ. ಈ ಭಾಗದಲ್ಲಿ ಬಿಜೆಪಿಗೆ ನಾನೇ ಸೀನಿಯರ್. ಕುಮಾರಸ್ವಾಮಿ ಕೂಡಾ ಪ್ರಜ್ಞಾವಂತರಿದ್ದಾರೆ. ಕಾದುನೋಡಿ ಎಲ್ಲರನ್ನೂ ಸಮಾಧಾನ ಮಾಡಿ ನನಗೆ ಟಿಕೆಟ್ ಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ನನಗಿರುವ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ಮುಖಂಡರು ನನ್ನ ಹೆಸರನ್ನು ಅಂತಿಮಗೊಳಿಸುತ್ತಾರೆ. ನನಗೆ ಪಕ್ಷದ ವರಿಷ್ಠರ ಮೇಲೆ ಸಂಪೂರ್ಣ ವಿಶ್ವಾಸ ಇದೆ. ಹಾಗಾಗಿ ನಾನು ಚುನಾವಣಾ ಕಣದಲ್ಲಿರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.