Publish Date: Sat, 10 Feb 2024 (21:00 IST)
Updated Date: Sat, 10 Feb 2024 (20:50 IST)
ಮೈಸೂರು-ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಸಂಬಂಧ ಅಮಿತ್ ಶಾ ಅವರು ಆಗಮಿಸುತ್ತಿದ್ದು, ಈ ವೇಳೆ ಪಕ್ಷದ ಸಂಘಟನೆ ಕುರಿತಂತೆ ಸಭೆಗಳನ್ನೂ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.ಲೋಕಸಭಾ ಚುನಾವಣೆಗೆ ಸಿದ್ಧತೆ ಕೈಗೊಳ್ಳುವ ಕುರಿತಂತೆ ಮುಂದಿನ ರಣತಂತ್ರ ರೂಪಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವ ಚಾಣಕ್ಯ ಅಮಿತ್ ಶಾ ಅವರು ಭಾನುವಾರ ಮೈಸೂರಿನಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ಕಮಿಟಿ ಸಭೆ ನಡೆಸಲಿದ್ದಾರೆ.
ವಾಸ್ತವವಾಗಿ ಈ ಭೇಟಿ ವೇಳೆ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸಿ ಪಕ್ಷ ಸಭೆಗಳನ್ನು ನಡೆಸುವುದು ಈ ಮೊದಲು ನಿರ್ಧಾರವಾಗಿತ್ತು. ಬಳಿಕ ಸಮಯದ ಅಭಾವದ ಕಾರಣ ಬದಲಾವಣೆ ಮಾಡಲಾಯಿತು. ಇದೀಗ ಭಾನುವಾರ ಮೈಸೂರಿನಲ್ಲೇ ಪಕ್ಷದ ಸಭೆಗಳನ್ನು ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಆ ಪ್ರಕಾರ, ಭಾನುವಾರ ಮಧ್ಯಾಹ್ನ 3 ಗಂಟೆಗೆ ಮೈಸೂರು, ಚಾಮರಾಜನಗರ, ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಮೈಸೂರು ಕ್ಲಸ್ಟರ್ ನ ಪಕ್ಷದ ಬೂತ್ ಅಧ್ಯಕ್ಷರು ಹಾಗೂ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅಮಿತ್ ಶಾ ಅವರು ಮಾತನಾಡಲಿದ್ದಾರೆ. ಸುಮಾರು ಹತ್ತು ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.