ಬೆಂಗಳೂರು: ಮೈಸೂರಿನಲ್ಲಿ ಅಂಬಾರಿ ಹೊರುತ್ತಿದ್ದ ಅರ್ಜುನ ಆನೆ ನಿನ್ನೆ ಕಾಡಾನೆಗಳ ದಾಳಿಯಲ್ಲಿ ಧಾರುಣವಾಗಿ ಸಾವನ್ನಪ್ಪಿತ್ತು ಎಂದು ವರದಿಯಾಗಿತ್ತು.
ಆದರೆ ಅರ್ಜುನನ ಸಾವಿಗೆ ಕಾಡಾನೆಗಳ ದಾಳಿಯೊಂದೇ ಕಾರಣವಲ್ಲ ಎಂಬ ಮಾತು ಈಗ ಕೇಳಿಬರುತ್ತಿದೆ. ಅರ್ಜುನನ ಸಾವಿಗೆ ಅಧಿಕಾರಿಗಳ ಎಡವಟ್ಟೇ ಕಾರಣ ಎನ್ನಲಾಗುತ್ತಿದೆ.
ಅರ್ಜುನ ಚಿಕ್ಕ ವಯಸ್ಸಿನಲ್ಲಿ ಕಾಡಾನೆಗಳ ಸದ್ದಡಗಿಸುತ್ತಿದ್ದ. ಆದರೆ ಈಗ ಅವನಿಗೆ 64 ವರ್ಷವಾಗಿದೆ. ಮುದಿ ಆನೆಯನ್ನು ಕಾಡಾನೆಗಳ ಹುಟ್ಟಡಗಿಸಲು ಕಳುಹಿಸಿದ್ದು ಅಧಿಕಾರಿಗಳ ಮೊದಲ ತಪ್ಪು ಎನ್ನಲಾಗಿದೆ.
ಇನ್ನೊಂದು ಮೂಲಗಳ ಪ್ರಕಾರ ಅರ್ಜುನನಿಗೆ ಗಾಯವಾಗಿದ್ದು ಕಾಡಾನೆಗಳಿಂದ ಅಲ್ಲ. ಕಾಡಾನೆಗಳಿಗೆ ಎಂದು ಅಧಿಕಾರಿಗಳು ಹೊಡೆದಿದ್ದ ಗುಂಡು ತಪ್ಪಿ ಅರ್ಜುನನಿಗೆ ತಗುಲಿತ್ತು. ಆದರೆ ಜನಾಕ್ರೋಶ ಕಂಡುಬರಬಹುದು ಎಂದು ಅಧಿಕಾರಿಗಳು ಈ ವಿಚಾರ ಮುಚ್ಚಿಟ್ಟಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬಹುದು ಎಂಬ ಆಗ್ರಹ ಕೇಳಿಬಂದಿದೆ.