Select Your Language

Notifications

webdunia
webdunia
webdunia
webdunia

ಕೇಂದ್ರ ಬಜೆಟ್ ನಿಂದ ಕಾಂಗ್ರೆಸ್ ಗೆ ಏನೂ ಸಿಕ್ಕಿಲ್ಲ, ಜನರಿಗೆ ಸಿಕ್ಕಿದೆ: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy

Krishnaveni K

ಬೆಂಗಳೂರು , ಸೋಮವಾರ, 3 ಫೆಬ್ರವರಿ 2025 (17:01 IST)
ಬೆಂಗಳೂರು: ಕೇಂದ್ರ ಬಜೆಟ್ ನಿಂದ ಕಾಂಗ್ರೆಸ್ ನವರಿಗೆ ಏನೂ ಸಿಕ್ಕಿಲ್ಲದೇ ಇರಬಹುದು. ಆದರೆ ದೇಶದ ಜನತೆ ಸಾಕಷ್ಟು ಕೊಡುಗೆ ಸಿಕ್ಕಿದೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರದ ಬಜೆಟ್ ಬಗ್ಗೆ ದೇಶದ ಎಲ್ಲ ಕಡೆಗಳಿಂದ ಪ್ರಶಂಸೆ ಬಂದಿದೆ. ವಿರೋಧ ಪಕ್ಷಗಳಿಂದ ಟೀಕೆಗಳು ಕೂಡ ಬಂದಿವೆ. ವಿರೋಧ ಪಕ್ಷವಾಗಿ ಪ್ರಶಂಸೆ ಮಾಡೋದು ಅವರಿಗೆ ಕಷ್ಟ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಸಹಜವಾಗಿ ಟೀಕೆ ಮಾಡಿದೆ. ಬಿಜೆಪಿ ವಿರುದ್ಧ ಮತ್ತು ಬಿಜೆಪಿ ಸರಕಾರದ ವಿರುದ್ಧ ಯಾವಾಗಲೂ ಆಂದೋಲನದ ರೀತಿಯಲ್ಲಿ ಟೀಕೆ ಮಾಡುವುದು ಅವರ ಸಹಜ ನಡವಳಿಕೆ. ಪ್ರಧಾನ ಮಂತ್ರಿ ಅನ್ನುವ ಗೌರವವೂ ಇಲ್ಲದೆ, ರಾಷ್ಟ್ರಪತಿಗಳ ಬಗ್ಗೆಯೂ ಕೆಟ್ಟದಾಗಿ ಮಾತನಾಡುವುದು ಅವರ ನಡವಳಿಕೆ.

ಇಡೀ ದೇಶದಲ್ಲಿ ಬಜೆಟ್‌ಗೆ ಅತ್ಯುತ್ತಮ ಪ್ರಶಂಸೆಗಳು ಬರ್ತಾ ಇವೆ. ಮುಖ್ಯಮಂತ್ರಿಗಳಿಂದ ಹಿಡಿದು ಅನೇಕ ಸಚಿವರೂ ಕೂಡ ಕರ್ನಾಟಕಕ್ಕೆ ಲಾಭ ಇಲ್ಲ, ಏನೂ ಸಿಕ್ಕಿಲ್ಲ ಅಂತ ಹೇಳ್ತಾ ಇದ್ದಾರೆ. ಬಜೆಟ್‌ನಲ್ಲಿ ಕಾಂಗ್ರೆಸ್‌ನವರಿಗೆ ಏನೂ ಸಿಗದೇ ಇರಬಹುದು. ಆದರೆ ದೇಶದ ಜನತೆಗೆ ಈ ಬಜೆಟ್‌ನಲ್ಲಿ ಸಾಕಷ್ಟು ಕೊಡುಗೆಗಳು ಸಿಕ್ಕಿವೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆ ಈ ಬಜೆಟ್ ಅನ್ನು ಸಂಪೂರ್ಣವಾಗಿ- ಸ್ವತಂತ್ರ ಭಾರತದ ಇಷ್ಟು ವರ್ಷಗಳ ಬಜೆಟ್‌ಗಳಲ್ಲಿ ಅತ್ಯುತ್ತಮ, ಮುಂದಾಲೋಚನೆ ಇರುವಂತಹ ಬಜೆಟ್ ಎಂದು ಶ್ಲಾಘಿಸಿದ್ದಾರೆ. ಅಭಿವೃದ್ಧಿಪರವಾದ ಬಜೆಟ್ ಎಂದು ಮುಕ್ತ ಕಂಠದಿಂದ ಹೊಗಳಿದ್ದಾರೆ.

ಕರ್ನಾಟಕಕ್ಕೆ ಕಳೆದ ವರ್ಷ 44,485.49 ಕೋಟಿ ರೂ.ಗಳ ನೆರವು ಕೇಂದ್ರದಿಂದ ಕೊಡಬೇಕಾಗಿತ್ತು. ಅದನ್ನೂ ಮೀರಿ, 46,937.72 ಕೋಟಿ ಸಿಕ್ಕಿದೆ. ಆದರೂ ನಮಗೇನೂ ಕೊಟ್ಟಿಲ್ಲ ನಮಗೇನೂ ಕೊಟ್ಟಿಲ್ಲ ಎಂದು ಸುಳ್ಳು ಹೇಳ್ತಾ ಇದ್ದಾರೆ. 2,400 ಚಿಲ್ಲರೆ ಕೋಟಿ ಹೆಚ್ಚುವರಿ ಸಿಕ್ಕಿದೆ. ಆದರೂ ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಜಿಎಸ್‌ಟಿ ಹಣ ಇದು. ಎಲ್ಲಾದರೂ ನಮಗೆ ಎರಡೂವರೆ ಸಾವಿರ ಕೋಟಿ ಹೆಚ್ಚಿಗೆ ಕೊಟ್ಟಿದ್ದಾರೆ ಅಂತ ಕಾಂಗ್ರೆಸ್‌ನವರು ಹೇಳಿದ್ದಾರಾ? ಈಗಲೂ ಅವರು ಹೇಳುತ್ತಿರುವುದು ಏನೂ ಕೊಟ್ಟಿಲ್ಲ ಅಂತ. ಈ ವರ್ಷದ ಬಜೆಟ್‌ನಲ್ಲಿ ಕಳೆದ ವರ್ಷಕ್ಕಿಂತ 10 ಪರ್ಸೆಂಟ್ ಹೆಚ್ಚಿಗೆ ಕೊಡುತ್ತಿದ್ದಾರೆ. ಆ ಮೂಲಕ 51,876.54 ಕೋಟಿ ರೂಗಳ ಅನುದಾನ ಕರ್ನಾಟಕಕ್ಕೆ ಬರುತ್ತದೆ. ಹಾಗಿದ್ದ ಮೇಲೆ ಏನೂ ಪ್ರಯೋಜನ ಇಲ್ಲ ಅಂತ ಹೇಗೆ ಹೇಳ್ತಾರೆ?

ರೈಲ್ವೇ ಯೋಜನೆಗಳಿಗೆ 7564 ಕೋಟಿ ಕೊಟ್ಟಿದ್ದಾರೆ. ಇದು ನಮಗೆ ಕೊಡುವ ಜಿಎಸ್‌ಟಿ ಹಣದಲ್ಲಿ ಅಲ್ಲ, ಇದು ಪ್ರತ್ಯೇಕ. ಪರಿಶಿಷ್ಟ ಜಾತಿ ವರ್ಗಗಳಿಗೆ ಕರ್ನಾಟಕದ ಬಜೆಟ್‌ ನಲ್ಲಿ ಸಿದ್ದರಾಮಯ್ಯ ಯಾವ ರೀತಿ ಹೇಳ್ತಾರೆ? 39,000 ಕೋಟಿ ಹಣವನ್ನು ಎಸ್‌ಸಿ/ಎಸ್‌ಟಿ ಅಭಿವೃದ್ಧಿಗೆ ಇಟ್ಟಿದ್ದೇವೆ ಅಂತ ಹೇಳ್ತಾರೆ. ಅದರಲ್ಲಿ ಒಂದು ಕೈಯ್ಯಲ್ಲಿ ಕೊಟ್ಟೆ, ಇನ್ನೊಂದು ಕೈಯಲ್ಲಿ ತಗೊಂಡೆ ಅನ್ನುವ ರೀತಿಯಲ್ಲಿ ಗ್ಯಾರಂಟಿಗಳಿಗೆ ವರ್ಗಾವಣೆ ಮಾಡ್ತಾರೆ.

ಒಂದು ವರ್ಷ 11 ಸಾವಿರ ಕೋಟಿ, ಇನ್ನೊಂದು ವರ್ಷದಲ್ಲಿ 14,000 ಕೋಟಿ- ಒಟ್ಟಿಗೆ 25,000 ಕೋಟಿ ದಲಿತರ ಹಣ ನುಂಗಿದ್ದಾಯ್ತು. ಕೇಳಿದ್ರೆ ಉತ್ತರ ಕೊಡಲ್ಲ. ಆದರೆ,  ಇಲ್ಲಿ ಈ ಹಣವನ್ನು ಬೇರೆ ಬೇರೆ ಇಲಾಖೆಗಳಿಗೆ ಮೀಸಲಿಡಬೇಕು. ವಂಚನೆ ಮಾಡಲಿಕ್ಕೆ ಒಂದು ಕಂತಿನ ಮೊತ್ತವನ್ನು ಮಾತ್ರ ಹೇಳ್ತಾರೆ. ಕೇಂದ್ರ ಸರಕಾರ ಇಡುವ ಹಣ ಅದು ಆಯಾ ಇಲಾಖೆಗಳಲ್ಲೇ ಇರ್ತದೆ. ಒಟ್ಟಾರೆ ಮೊತ್ತ ಇಷ್ಟು ಅಂತ ಹೇಳುವುದಿಲ್ಲ. ಆಯಾ ಇಲಾಖೆಗಳಲ್ಲಿ ಹಾಗೆಯೇ ಖರ್ಚಾಗ್ತದೆ.

ಕಾಂಗ್ರೆಸ್ ಹೇಳುವ ಹಾಗೆ- ಕೇಂದ್ರದ ಬಜೆಟ್ ಯಾವಾಗಲೂ ಒಂದು ರಾಜ್ಯವನ್ನು ಗಮನದಲ್ಲಿಟ್ಟುಕೊಂಡು ಮಾಡುವಂಥದ್ದಲ್ಲ. ರಾಜ್ಯ ಸರಕಾರ ಕೂಡ ಜಿಲ್ಲೆ ಜಿಲ್ಲೆಗೆ ಇಷ್ಟು ಹಣ ಇಟ್ಟಿದ್ದೇವೆ ಅಂತ ಹೇಳುವುದಿಲ್ಲ. ಅದೇ ರೀತಿ ಇಡೀ ದೇಶದ ಬಜೆಟ್ ಮಂಡಿಸುವಾಗ ಈ ರಾಜ್ಯಕ್ಕೆ ಇಷ್ಟು ಆ ರಾಜ್ಯಕ್ಕೆ ಇಷ್ಟು ಅಂತ ಹೇಳುವುದಿಲ್ಲ. ಕರ್ನಾಟಕಕ್ಕೆ ಏನೂ ಕೊಟ್ಟೇ ಇಲ್ಲ ಎನ್ನುವುದು ಹಾಸ್ಯಾಸ್ಪದ.

ಚನ್ನಸಂದ್ರ ಮಾರ್ಗ ಯೋಜನೆ- 178 ಕೋಟಿ, ಕಡೂರು-ಚಿಕ್ಕಮಗಳೂರು- ಸಕಲೇಶಪುರ 28 ಕೋಟಿ ಸೇರಿದಂತೆ ಕರ್ನಾಟಕದ 22 ಯೋಜನೆಗಳಿಗೆ ಈ ಸಲ ಬಜೆಟ್‌ನಲ್ಲಿ ಹಣ ಕೊಟ್ಟಿದ್ದಾರೆ. ರೈಲ್ವೇ ಸಚಿವ ವಿ ಸೋಮಣ್ಣನವರು ಕಾಂಗ್ರೆಸ್ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ. ಮಧ್ಯಮ ವರ್ಗದವರು ಬಹಳ ಸಂತುಷ್ಟರಾಗಿದ್ದಾರೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳದ ಬಗ್ಗೆ ಅಮಿತಾಭ್ ಬಚ್ಚನ್ ಮಡದಿ ಜಯಾ ಬಚ್ಚನ್ ನಿಂದ ಇದೆಂಥಾ ಕಾಮೆಂಟ್