ಬೆಂಗಳೂರು: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಪ್ರವೇಶ ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ಬಿಗ್ ಆಫರ್ ನೀಡಿದ್ದಾರೆ.
ಬೀದರ್ ನ ಸುಚಿವ್ರತ್ ಕುಲಕರ್ಣಿಗೆ ಜನಿವಾರ ಹಾಕಿದ ಕಾರಣಕ್ಕೆ ಸಿಇಟಿ ಗಣಿತ ಪರೀಕ್ಷೆ ಬರೆಯಲು ಅಧಿಕಾರಿಗಳು ಬಿಡಲಿಲ್ಲ. ಘಟನೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ರಾಜ್ಯಾದ್ಯಂತ ಬ್ರಾಹ್ಮಣ ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿದ್ದವು.
ಇದರ ಬೆನ್ನಲ್ಲೇ ವಿದ್ಯಾರ್ಥಿಗೆ ನ್ಯಾಯ ಕೊಡಿಸುವುದಾಗಿ ಶಿಕ್ಷಣ ಸಚಿವರು ಭರವಸೆ ನೀಡಿದ್ದರು. ಇದೀಗ ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ವಿದ್ಯಾರ್ಥಿಗೆ ಎರಡು ಅವಕಾಶ ನೀಡಿದ್ದಾರೆ. ಒಂದು ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ಅಂಕದ ಆಧಾರದಲ್ಲಿ ವಿದ್ಯಾರ್ಥಿಗೆ ರಾಂಕ್ ನೀಡುವುದು. ಎರಡನೆಯದ್ದು ಹೊಸದಾಗಿ ಪರೀಕ್ಷೆ ಬರೆಯಲು ಅವಕಾಶ ನೀಡುವುದು.
ಇದೀಗ ವಿದ್ಯಾರ್ಥಿ ಸುಚಿವ್ರತ್ ಯಾವುದನ್ನು ಆಯ್ಕೆ ಮಾಡುತ್ತಾನೆ ನೋಡಬೇಕಿದೆ. ಇದರ ನಡುವೆ ಅರಣ್ಯಸಚಿವ ಈಶ್ವರ್ ಖಂಡ್ರೆ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗೆ ತಮ್ಮದೇ ಕಾಲೇಜಿನಲ್ಲಿ ಉಚಿತವಾಗಿ ಇಂಜಿನಿಯರಿಂಗ್ ಸೀಟ್ ಕೊಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಈಗ ಆಯ್ಕೆ ಸುಚಿವ್ರತ್ ಮುಂದಿದೆ.