ಬೆಂಗಳೂರು: ಒಂದನೇ ತರಗತಿಗೆ ಸೇರ್ಪಡೆಯಾಗಲು ಜೂನ್ 1 ಕ್ಕೆ 6 ವರ್ಷ ಕಡ್ಡಾಯವಾಗಿ ಪೂರ್ತಿಯಾಗಿರಬೇಕು ಎಂದು ಸರ್ಕಾರ ಷರತ್ತು ವಿಧಿಸಿದೆ. ಆದರೆ ಸರ್ಕಾರದ ನಿರ್ಧಾರದಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಸರ್ಕಾರವೇನೋ ಮಕ್ಕಳ ಬೆಳವಣಿಗೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರಬಹುದು. ಆದರೆ ಜೂನ್ 1 ಕ್ಕೆ 6 ವರ್ಷ ಪೂರೈಸಿರಬೇಕು ಎನ್ನುವ ನಿಯಮ ಕೆಲವು ಮಕ್ಕಳ ಪಾಲಿಗೆ ಕಂಟಕವಾಗಿದೆ. ಇದೇ ಕಾರಣಕ್ಕೆ ಪೋಷಕರು ಈಗ ನಿಯಮ ಸಡಿಲಿಕೆ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕೆಲವು ಮಕ್ಕಳಿಗೆ ಜೂನ್ 2 ರಂದು ಅಥವಾ ಒಂದು ವಾರದ ಬಳಿಕ 6 ವರ್ಷ ತುಂಬುತ್ತದೆ. ಈ ಮಕ್ಕಳು ಕೇವಲ ಒಂದು ದಿನ ಅಥವಾ ಒಂದು ವಾರದ ಅಂತರದಿಂದಾಗಿ 1 ನೇ ತರಗತಿ ಸೇರಲು 1 ವರ್ಷ ಕಾಯಬೇಕಿದೆ. ಇದರಿಂದಾಗಿ ಈ ಮಕ್ಕಳು ಎಸ್ಎಸ್ಎಲ್ ಸಿ ಮುಗಿಸುವ ಹೊತ್ತಿಗೆ 17 ನೇ ವರ್ಷಕ್ಕೆ ಕಾಲಿಟ್ಟಿರುತ್ತಾರೆ! ಇದುವೇ ಪೋಷಕರ ಚಿಂತೆಗೆ ಕಾರಣವಾಗಿದೆ.
ಯುಕೆಜಿ ಮುಗಿಸಿರುವವರ ಕತೆ ಏನು?
ಈಗಾಗಲೇ ಯುಕೆಜಿ ಮುಗಿಸಿರುವ ವಿದ್ಯಾರ್ಥಿಗಳು ಕೇವಲ ಕೆಲವೇ ದಿನಗಳಿಗೆ ವಯಸ್ಸು ಪೂರ್ತಿಯಾಗುತ್ತಿಲ್ಲ ಎಂಬ ಕಾರಣಕ್ಕೆ 1 ನೇ ತರಗತಿಗೆ ಸೇರಲು ಸಾಧ್ಯವಾಗುತ್ತಿಲ್ಲ. ಇಂತಹ ಮಕ್ಕಳ ಕತೆಯೇನು ಎಂಬುದು ಪೋಷಕರ ಪ್ರಶ್ನೆಯಾಗಿದೆ. ಒಂದು ವರ್ಷ ಮಕ್ಕಳನ್ನು ಮನೆಯಲ್ಲೇ ಕೂರಿಸಿದರೆ ಅವರಿಗೆ ಶಾಲೆಯ ಮೇಲೆ ಆಸಕ್ತಿ ಹೋಗಬಹುದು. ಇಲ್ಲವೇ ಒಂದು ರೀತಿಯಲ್ಲಿ ಮಂಕಾಗಬಹುದು.
ಬೆಂಗಳೂರಿನಂತಹ ನಗರಗಳ ಖಾಸಗಿ ಶಾಲೆಗಳಲ್ಲಿ ದುಬಾರಿ ಫೀಸ್ ಕೊಟ್ಟು ಯುಕೆಜಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಈಗ ಮತ್ತೆ ಇನ್ನೊಂದು ವರ್ಷ ದುಬಾರಿ ಫೀಸ್ ಕೊಟ್ಟು ಯುಕೆಜಿಗೆ ಕಳುಹಿಸಲೂ ಅಲ್ಲ, ಒಂದನೇ ತರಗತಿಗೆ ದಾಖಲಾಯಿತೂ ಇಲ್ಲ ಎಂಬ ಪರಿಸ್ಥಿತಿಯಾಗಿದೆ. ಹೀಗಾಗಿ ಕನಿಷ್ಠ 1 ತಿಂಗಳ ಅಂತರವಿದ್ದವರಿಗಾದರೂ ವಿನಾಯ್ತಿ ಕೊಡಿ ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ.