ಬೆಂಗಳೂರು: ಪಾಕ್ ಗೂಢಾಚಾರಿ ಬಂಧನ ಪ್ರಕರಣ ಸಂಬಂಧ 12 ದಿನಗಳ ಪೊಲೀಸ್ ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ವಿವಿಧ ಆಯಮಾಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಆತನ ಮೊಬೈಲ್ ಅನ್ನು ಎಫ್ಎಸ್ಎಲ್ಗೆ ರವಾನಿಸಲಾಗಿದೆ.
ಸೇನಾನೆಲೆ ಹಾಗೂ ದೇಶದ ಪ್ರಮುಖ ಸ್ಥಳಗಳ ಬಗೆಗಿನ ವಿವರಗಳನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ಗೆ (ಐಎಸ್ಐ) ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ.
ಮಿಲಿಟರಿ ಗುಪ್ತಚರದ ದಕ್ಷಿಣ ಕಮಾಂಡೊ ತಂಡ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದರು. ಕಾಟನ್ಪೇಟೆಯ ಜಾಲಿ ಮಹೊಲ್ಲಾದಲ್ಲಿ ಜಿತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದರು.
ಸೇನಾನೆಲೆ ಹಾಗೂ ವಾಹನಗಳಿಗೆ ಸಂಬಂಧಿಸಿದ ಗುಪ್ತ ಮಾಹಿತಿಯ ಫೋಟೊಗಳನ್ನು ನಿರಂತರವಾಗಿ ಪಾಕಿಸ್ತಾನದ ಐಎಸ್ಐ ಅಧಿಕಾರಿಗೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಇಂಟಿಲಿಜೆನ್ಸ್ ಆಫ್ ಬ್ಯೂರೋ (ಐಬಿ) ಜಿತೇಂದರ್ ಮೊಬೈಲ್ ಟ್ರ್ಯಾಕ್, ಲೊಕೇಷನ್ ಸರ್ಚ್ ಮಾಡಿದಾಗ ಬೆಂಗಳೂರಿನಲ್ಲಿ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ ಐಬಿ, ಕಾಟನ್ಪೇಟೆಯಲ್ಲಿ ವಾಸವಾಗಿದ್ದ ಆರೋಪಿಯನ್ನು ಬಂಧಿಸಿದ್ದರು.
ವಿಚಾರಣೆ ಎದುರಿಸುತ್ತಿರುವ ಜಿತೇಂದರ್ ಸಿಂಗ್ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. 2018ರಲ್ಲಿ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದ ಜಿತೇಂದರ್ ಸಿಂಗ್, ಬೀದಿಬದಿ ವ್ಯಾಪಾರಿಗಳಿಗೆ ಬಟ್ಟೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದ.