ಕಲಬುರ್ಗಿ: ಮೊದಲು ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬಕ್ಕೆ ಪರಿಹಾರ ಕೊಡಿ. ಜೊತೆಗೇ ರೈತರ ಸಂಕಷ್ಟಕ್ಕೂ ಸ್ಪಂದಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರೈತರೊಬ್ಬರು ಬೆಳೆ ನಾಶವಾಗಿದೆ. ತೊಗರಿ ಬೆಳೆ ನಾಶವಾಗಿದೆ. 4 ಎಕರೆಗೆ ಪರಿಹಾರ ಕೊಡಿಸಿ ಎಂದು ಕೇಳಿದರೆ, ನನ್ನದೇ 40 ಎಕರೆ ಇದೆ; ನನ್ನ ಬೆಳೆಯೂ ಸಂಪೂರ್ಣ ನಾಶವಾಗಿದೆ. ಪರಿಹಾರ ಬಂದಿಲ್ಲ ಎಂಬ ಮಾತು ಮಲ್ಲಿಕಾರ್ಜುನ ಖರ್ಗೆಯವರದು ಎಂದು ಆಕ್ಷೇಪಿಸಿದರು.
ಒಣಭೂಮಿಗೆ ಎನ್‍ಡಿಆರ್‍ಎಫ್ ನಿಯಮದಡಿ ಹೆಕ್ಟೇರ್‍ಗೆ 6 ಸಾವಿರ ರೂ. ಪರಿಹಾರ ಇತ್ತು. ಆದರೆ, ಮುಖ್ಯಮಂತ್ರಿಗಳಾಗಿದ್ದ ರೈತನಾಯಕ ಯಡಿಯೂರಪ್ಪ ಅವರು ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿ ಪ್ರವಾಹಪೀಡಿತರಿಗೆ ರಾಜ್ಯದಿಂದ ಎನ್‍ಡಿಆರ್‍ಎಫ್ ಮಾದರಿಯ ನೆರವು ನೀಡಿದ್ದರು. ಸಿದ್ದರಾಮಯ್ಯನವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಆರೋಪ ಮಾಡುತ್ತಿಲ್ಲ; ಆ ಕಾಳಜಿ ವ್ಯಕ್ತವಾಗಲಿ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಸಂದಿಗ್ಧ ಪರಿಸ್ಥಿತಿಯಲ್ಲಿರುವ ರೈತರ ಬಗ್ಗೆ ಈಗ ನೀವು ಕಾಳಜಿ ತೋರಿಸದೇ ಇದ್ದರೆ ಇನ್ಯಾವಾಗ ಕಾಳಜಿ ತೋರಿಸುತ್ತೀರಿ ಎಂದು ಪ್ರಶ್ನಿಸಿದರು. ಎಕರೆಗೆ 25ರಿಂದ 30 ಸಾವಿರ ರೂ. ಪರಿಹಾರ ಕೊಡಬೇಕೆಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.