ಬೆಂಗಳೂರು: ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ತಿರುಗಿಬಿದ್ದಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಏಕಾಂಗಿಯಾಗಿ ದೆಹಲಿಗೆ ಬರುವಂತೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ರಾಜ್ಯ ಬಿಜೆಪಿಯಲ್ಲಿ ಈಗ ಬಣ ತಿಕ್ಕಾಟ ತಾರಕಕ್ಕೇರಿದೆ. ಪ್ರತಿಪಕ್ಷಗಳ ರೇಂಜಿಗೆ ಎರಡೂ ಬಣಗಳ ನಾಯಕರು ಬಹಿರಂಗವಾಗಿಯೇ ವಾಗ್ದಾಳಿ ನಡೆಸುತ್ತಿದ್ದಾರೆ. ವಿಜಯೇಂದ್ರ ವಿರುದ್ಧ ಯತ್ನಾಳ್ ಬಹಿರಂಗವಾಗಿಯೇ ಭ್ರಷ್ಟಾಚಾರ, ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿರುವ ಆರೋಪ ಮಾಡಿದ್ದಾರೆ.
ಇತ್ತ ವಿಜಯೇಂದ್ರ ಬಣ ಕೂಡಾ ತಿರುಗೇಟು ನೀಡುತ್ತಿದ್ದು, ಯತ್ನಾಳ್ ಕಾಂಗ್ರೆಸ್ ಜೊತೆ ಒಪ್ಪಂದ ಮಾಡಿಕೊಂಡು ವಕ್ಫ್ ಹೋರಾಟ ಕ್ಷೀಣಿಸಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸುತ್ತಿದೆ. ಈ ಎರಡೂ ಬಣ ಜಗಳದಿಂದಾಗಿ ರಾಜ್ಯ ಸರ್ಕಾರದ ವಿರುದ್ಧ ಮಾಡಬೇಕಿರುವ ವಕ್ಫ್ ಹೋರಾಟ ಹಳ್ಳ ಹಿಡಿಯುತ್ತಿದೆ.
ಇದರ ಬೆನ್ನಲ್ಲೇ ಯತ್ನಾಳ್ ಗೆ ಡಿಸೆಂಬರ್ 3 ರಂದು ದೆಹಲಿಗೆ ಬರುವಂತೆ ಹೈಕಮಾಂಡ್ ಕರೆ ನೀಡಿದೆ. ಈ ಮೊದಲು ಕರೆ ನೀಡಾದ ಯತ್ನಾಳ್ ನನ್ನ ಇಡೀ ತಂಡವನ್ನು ಕರೆದರೆ ಬರುವುದಾಗಿ ಹೇಳಿದ್ದರು. ಇದೀಗ ಮತ್ತೊಮ್ಮೆ ಬಿಜೆಪಿ ಹೈಕಮಾಂಡ್ ಏಕಾಂಗಿಯಾಗಿ ದೆಹಲಿಗೆ ಬರುವಂತೆ ಬುಲಾವ್ ನೀಡಿದೆ. ವಿಜಯೇಂದ್ರ ಬಣ ಯತ್ನಾಳ್ ರನ್ನು ಕಿತ್ತು ಹಾಕಲೇಬೇಕು ಎಂದು ಪಟ್ಟು ಹಿಡಿದಿದ್ದರೆ ಇತ್ತ ಯತ್ನಾಳ್ ಬಣ ವಿಜಯೇಂದ್ರರನ್ನು ರಾಜ್ಯ ಬಿಜೆಪಿ ಚುಕ್ಕಾಣಿಯಿಂದ ಕೆಳಗಿಳಿಸಬೇಕು ಎಂದು ಹಠ ಹಿಡಿದಿದೆ. ಹೈಕಮಾಂಡ್ ಮಧ್ಯಪ್ರವೇಶದಿಂದ ಏನಾಗಲಿದೆ ಎಂದು ಕಾದುನೋಡಬೇಕಿದೆ.