ಬೆಂಗಳೂರು: ಎಲ್ಲ ರಂಗದಲ್ಲೂ ದರ ಹೆಚ್ಚಿಸಿದ ಕೀರ್ತಿ ಕಾಂಗ್ರೆಸ್ ಸರಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ತಿ ನೋಂದಣಿ ಶುಲ್ಕವು ಶೇ 600ರಷ್ಟು ಹೆಚ್ಚಳವಾಗಿದೆ. ಆಸ್ತಿ ಗೈಡೆನ್ಸ್ ಮೌಲ್ಯವೂ ಶೇ 30ರಷ್ಟು ಏರಿಕೆ ಕಂಡಿದೆ. ವಾಹನಗಳ ನೋಂದಣಿ ದರವು ಶೇ 10ರಷ್ಟು ಜಾಸ್ತಿ ಆದರೆ, ಆಸ್ಪತ್ರೆಗಳ ಸೇವಾ ಶುಲ್ಕ ಶೇ 5ರಷ್ಟು ಏರಿದೆ. ವಿದ್ಯುತ್ ದರವು ಶೇ 14.5ರಷ್ಟು ಜಾಸ್ತಿಯಾಗಿದೆ. ನೀರಿನ ದರವು ಶೇ 30 ಏರಿದೆ. ಹಾಲಿನ ದರ ಶೇ 15ರಷ್ಟು ಹೆಚ್ಚಾಗಿದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ ರೂ. 1,90,000 ಕೋಟಿ ಸಾಲ ಮಾಡಿದೆ ಎಂಬುದನ್ನು ನಾಡಿನ ಜನರು ಗಮನಿಸಬೇಕಿದೆ. ವಿವಿಧ ಸರಕಾರಿ ಇಲಾಖೆಗಳ ಆರು ಸಾವಿರ ಕೋಟಿ ವಿದ್ಯುತ್ ಬಿಲ್ ಬಾಕಿ ಇದ್ದು, ಅದರ ವಸೂಲಿ ಕುರಿತು ಸಂಬಂಧಿತ ಸಚಿವರ ಜೊತೆ ಚರ್ಚಿಸಿದ್ದಾಗಿ ಇಂಧನ ಸಚಿವ ಜಾರ್ಜ್ ಅವರೇ ಹೇಳಿದ್ದಾರೆ. ಸಂಬಳ ಕೊಡಲಾಗದ, ವಿದ್ಯುತ್ ಬಿಲ್ ಭರಿಸಲಾಗದ ದಾರುಣ ಸ್ಥಿತಿಗೆ ರಾಜ್ಯ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇದಕ್ಕೆ ಯಾರು ಹೊಣೆ ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಲು ಆಗ್ರಹಿಸಿದರು.
ರಾಜ್ಯ ಸರಕಾರದ ಒತ್ತಾಯದ ಮೇರೆಗೆ ಮೆಟ್ರೊ ದರ ಗರಿಷ್ಠ ಮಟ್ಟಕ್ಕೆ ಏರಿಕೆ
ಬಸ್ಸಿನ ಪ್ರಯಾಣದರವೂ ಶೇ 15 ರಷ್ಟು ಹೆಚ್ಚಾಗಿದೆ. ಮೆಟ್ರೊ ಪ್ರಯಾಣ ದರ ಗರಿಷ್ಠ ಏರಿಕೆ ಒಂದು ದುಸ್ಸಾಹಸ ಎಂದು ಟೀಕಿಸಿದರು. ರಾಜ್ಯ ಸರಕಾರದ ಒತ್ತಾಯದ ಮೇರೆಗೆ ಮೆಟ್ರೊ ಪ್ರಯಾಣ ದರ ಗರಿಷ್ಠ ಮಟ್ಟಕ್ಕೆ ಏರಿಸಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಅವರು ದೂರಿದರು. ಚೆನ್ನೈ, ಲಕ್ನೋ, ಮುಂಬೈ, ಕೋಲ್ಕತ್ತ, ದೆಹಲಿಯಲ್ಲಿ ಮೆಟ್ರೋ ದರ ಏರಿಕೆ ಆಗಿಲ್ಲ. ರಾಜ್ಯ ಸರಕಾರದ ಆಗ್ರಹದಿಂದ ಇಲ್ಲಿ ಹೀಗಾಗಿದೆ ಎಂದು ಗಮನಕ್ಕೆ ತಂದರು.
ಸರಕಾರವು ಗ್ಯಾರಂಟಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ; ಇದರಿಂದ ಬೆಂಗಳೂರಿನ ಜನತೆ ಅತಿ ಹೆಚ್ಚು ಆಸ್ತಿ ತೆರಿಗೆ ಕಟ್ಟುತ್ತಿದ್ದಾರೆ. ವಾಹನ, ನೀರಿನ ದರ ಹೆಚ್ಚು ಪಾವತಿಸುತ್ತಿದ್ದಾರೆ. ಆದಾಯ ತೆರಿಗೆಯನ್ನೂ ಹೆಚ್ಚು ಕಟ್ಟುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮೆಟ್ರೊ ದರ ಏರಿಕೆ ವಿಚಾರದಲ್ಲೂ ಕಾಂಗ್ರೆಸ್ ಪಕ್ಷ ಕೇಂದ್ರದತ್ತ ಬೊಟ್ಟು ಮಾಡುವ ಚಾಳಿ ಮುಂದುವರೆಸಿದೆ ಎಂದು ದೂರಿದರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು 2 ವರ್ಷಗಳಲ್ಲಿ 2ನೇ ಬಾರಿಗೆ ಮತ್ತೆ ಹಾಲಿನ ದರ ಏರಿಸಲು, ವಿದ್ಯುತ್ ದರ ಹೆಚ್ಚಿಸಲು ಸರಕಾರದ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿವೆ ಎಂದು ಆಕ್ಷೇಪಿಸಿದರು.
ಒಂದೆಡೆ ಮುಖ್ಯಮಂತ್ರಿಗಳು ನಾಡು ಸುಭಿಕ್ಷವಾಗಿದೆ; ರಾಜ್ಯದ ಜನರು ಸಂತೋಷದಲ್ಲಿದ್ದಾರೆ; ರೈತರು, ಬಡವರು ನೆಮ್ಮದಿಯಿಂದ ಇದ್ದಾರೆ. ಗ್ಯಾರಂಟಿಗಳ ಅನುಷ್ಠಾನದ ಪರಿಣಾಮವಾಗಿ ಎಲ್ಲ ವರ್ಗದ ಜನರು ಸಂತಸದಿಂದಿದ್ದಾರೆ ಎಂಬ ಭ್ರಮೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಇದ್ದಾರೆ ಎಂಬುದು ಚರ್ಚಾ ವಿಷಯವಾಗಿದೆ ಎಂದರು.
ರಾಜ್ಯದ ಹಣಕಾಸಿನ ಪರಿಸ್ಥಿತಿ ಅಧೋಗತಿಗೆ ಬಂದು ತಲುಪಿದೆ. ಇನ್ನೊಂದೆಡೆ ಗೃಹಲಕ್ಷ್ಮಿ ಯೋಜನೆ 2 ಸಾವಿರ ರೂ. ಐದಾರು ತಿಂಗಳಿಂದ ಸಿಗುತ್ತಿಲ್ಲ; 5 ಕೆಜಿ ಅಕ್ಕಿಯ ಹಣವನ್ನೂ ಕೊಡುತ್ತಿಲ್ಲ ಎಂದು ಗಮನಕ್ಕೆ ತಂದರು.
ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾರ್ಚ್ 7ರಂದು 16ನೇ ಬಜೆಟ್ ಮಂಡಿಸುತ್ತಿದ್ದಾರೆ. ಅತಿ ಹೆಚ್ಚು ಬಜೆಟ್ ಮಂಡಿಸಿದ ಕೀರ್ತಿ ಅಥವಾ ದಾಖಲೆಯನ್ನು ಸಿದ್ದರಾಮಯ್ಯನವರು ನಿರ್ಮಾಣ ಮಾಡಲಿದ್ದಾರೆ ಎಂದರು.