Select Your Language

Notifications

webdunia
webdunia
webdunia
webdunia

ಒಳಮೀಸಲಾತಿಯಲ್ಲಿ ಎಲ್ಲಾ ಜಾತಿಯವರಿಗೂ ನ್ಯಾಯ ಕೊಡಿ: ವಿಜಯೇಂದ್ರ ಆಗ್ರಹ

BY Vijayendra

Krishnaveni K

ಬೆಂಗಳೂರು , ಮಂಗಳವಾರ, 19 ಆಗಸ್ಟ್ 2025 (14:48 IST)
ಬೆಂಗಳೂರು: ಎಸ್.ಸಿ. ಸಮುದಾಯದ 101 ಜಾತಿಗಳಿದ್ದು, ಒಳ ಮೀಸಲಾತಿ ಜಾರಿ ಮಾಡುವಾಗ ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನೀವು ರಾಜ್ಯದ ಮುಖ್ಯಮಂತ್ರಿಗಳು. ಒಳ ಮೀಸಲಾತಿ ವಿಚಾರದಲ್ಲಿ ದೃಢ ನಿರ್ಧಾರ ತೆಗೆದುಕೊಳ್ಳಬೇಕು. ಎಸ್‍ಸಿ ಸಮುದಾಯದ 101 ಜಾತಿಗಳಿದ್ದು, ಯಾವುದೇ ಜಾತಿಗೆ ಅನ್ಯಾಯ ಆಗದಂತೆ ನಿರ್ಣಯ ತೆಗೆದುಕೊಳ್ಳಬೇಕು. ನೀವು ತೆಗೆದುಕೊಳ್ಳುವ ತೀರ್ಮಾನದಿಂದ ನಾಳೆ ಇತರ ಜಾತಿಗಳವರು, ಎಸ್‍ಸಿ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡದಂತೆ ನೋಡಿಕೊಳ್ಳಿ ಎಂದು ತಿಳಿಸಿದರು. 

ಎಲ್ಲ ವಿಷಯಗಳನ್ನೂ ವಿಮರ್ಶಿಸಿ, ಸಮರ್ಪಕ ತೀರ್ಮಾನವನ್ನು ರಾಜ್ಯದ ಮುಖ್ಯಮಂತ್ರಿಗಳು ತೆಗೆದುಕೊಳ್ಳಬೇಕು ಎಂದು ವಿನಂತಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲ ಗೊಂದಲಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಾರಣಕರ್ತರು. ಗೊಂದಲಗಳು, ಸಮಸ್ಯೆಗೆ ಇತಿಶ್ರೀ ಹಾಡುವ ಕರ್ತವ್ಯ ಈ ರಾಜ್ಯದ ಮುಖ್ಯಮಂತ್ರಿಗಳಿಗೆ ಇದೆ. ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬ ಅಪೇಕ್ಷೆಯಲ್ಲಿ ನಮ್ಮ ಎಸ್‍ಸಿ ಸಮುದಾಯ ಇದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಒಳ ಮೀಸಲಾತಿ ವಿಷಯದಲ್ಲಿ ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳಲು ಆಗಿಲ್ಲ. ಸರಕಾರವು ಗೊಂದಲದಲ್ಲಿ ಇರುವುದನ್ನು ನಾವು ನೋಡಿದ್ದೇವೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಇದ್ದಾಗ ಪರಿಶಿಷ್ಟ ಜಾತಿಗೆ ಶೇ 15 ಇದ್ದುದನ್ನು ಶೇ 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಶೇ 3 ಇದ್ದುದನ್ನು ಏರಿಸಿ ಶೇ 7 ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯನವರು, ಅವರ ಜೊತೆಗಾರರು ಅದು ಅನುಷ್ಠಾನ ಆಗಿಲ್ಲ; ಬಿಜೆಪಿಯವರು ಕೇವಲ ಭಾಷಣ ಮಾಡುತ್ತಾರೆ ಎಂದು ಅಪಪ್ರಚಾರ ಮಾಡಿದ್ದರು ಎಂದು ಆಕ್ಷೇಪಿಸಿದರು.
 
ನಾಗಮೋಹನ್‍ದಾಸ್ ವರದಿ ಅಂಶಗಳು ಏನಿದೆಯೋ ಅದನ್ನೇ ಬಿಜೆಪಿ ಈ ಹಿಂದೆ ಜಾರಿ ಮಾಡಿತ್ತು. ಸಿದ್ದರಾಮಯ್ಯನವರು ಇವತ್ತು ಸಚಿವ ಸಂಪುಟದ ವಿಶೇಷ ಸಭೆ ಕರೆದಿದ್ದಾರೆ. ಹಿಂದೆ ಬಿಜೆಪಿ ಸರಕಾರ ಮಾಡಿದ್ದನ್ನೇ ಇವರೂ ಮಾಡಲು ಹೊರಟಿದ್ದಾರೆ ಎಂದು ವಿಶ್ಲೇಷಿಸಿದರು.
 
ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ
ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ ಎಂದು ವಿಜಯೇಂದ್ರ ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಅಪಪ್ರಚಾರ, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಆಗಿದ್ದು, ರಾಜ್ಯ ಸರಕಾರಕ್ಕೆ ಧರ್ಮಸ್ಥಳ- ಶ್ರೀ ಮಂಜುನಾಥೇಶ್ವರನ ಬಗ್ಗೆ ಕಿಂಚಿತ್ತಾದರೂ ನಂಬಿಕೆ ಇದ್ದರೆ, ಆ ಶಕ್ತಿಗಳ ಕುರಿತು ಸರಕಾರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.
 
 
ಹಿಂದೆ ಮೈಸೂರಿನಲ್ಲಿ ನಮ್ಮ ಒಬ್ಬ ಹಿಂದೂ ಕಾರ್ಯಕರ್ತ ಅನ್ಯ ಧರ್ಮದ ಕುರಿತು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಹಾಕಿದ್ದಾರೆಂದು 24 ಗಂಟೆಯಲ್ಲೇ ಬಂಧಿಸಿದ್ದರು. ಒಂದು ಕೋಮಿನ ಜನ ಪೊಲೀಸ್ ಠಾಣೆಗೆ ನುಗ್ಗಿ ಅಲ್ಲಿ ಠಾಣೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ತುಮಕೂರಿನಲ್ಲಿ ಹಿಂದೂಪರ ಮಹಿಳಾ ಕಾರ್ಯಕರ್ತೆ ಕುರಿತು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಹಾಕಿದ್ದಾರೆಂದು ಬಂಧಿಸಿದ್ದರು. ಧರ್ಮಸ್ಥಳದ ವಿಷಯದಲ್ಲಿ ನಂಬಿಕೆ ಇಟ್ಟುಕೊಂಡಿರುವುದಾಗಿ ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಅಪಪ್ರಚಾರ ನಡೆಯುವಾಗ ಮುಖ್ಯಮಂತ್ರಿಗಳು, ಡಿಸಿಎಂ ಮತ್ತು ಗೃಹ ಸಚಿವರು ಯಾಕೆ ಅಪಪ್ರಚಾರ ಸ್ಥಗಿತಗೊಳಿಸುವ ಕೆಲಸ ಮಾಡಿಲ್ಲ ಎಂದು ಕೇಳಿದರು.

ಅಪಪ್ರಚಾರ ನಿರತ ಸಂಘಟನೆಗಳ ವಿರುದ್ಧ ಯಾಕೆ ಇನ್ನೂ ಎಫ್‍ಐಆರ್ ದಾಖಲಿಸಿಲ್ಲ? ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಂದಾಗ ಯಾಕೆ ರಾಜ್ಯ ಸರಕಾರ ತಕ್ಷಣ ಸ್ಪಂದಿಸಿಲ್ಲ? ಎಂಬುದಕ್ಕೂ ಉತ್ತರ ಕೊಡಿ ಎಂದು ಒತ್ತಾಯಿಸಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂಡಿಯಾ ಒಕ್ಕೂಟದ ಉಪರಾಷ್ಟ್ರಪತಿ ಸುದರ್ಶನ ರೆಡ್ಡಿ ಯಾರು