Select Your Language

Notifications

webdunia
webdunia
webdunia
webdunia

ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಲಿ: ಧರ್ಮಸ್ಥಳದಲ್ಲಿ ವಿಜಯೇಂದ್ರ ಗರ್ಜನೆ

Dharmasthala case, BJP State President Vijayendra, Chief Minister Siddaramaiah

Sampriya

ಮಂಗಳೂರು , ಭಾನುವಾರ, 17 ಆಗಸ್ಟ್ 2025 (14:24 IST)
Photo Credit X
ಮಂಗಳೂರು: ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರ ನಡೆದಿದ್ದು, ಅವುಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿಲ್ಲ; ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಧರ್ಮಸ್ಥಳದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಈ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ; ಶ್ರೀ ಕ್ಷೇತ್ರ ಧರ್ಮಸ್ಥಳ, ದೇವರು, ಅಣ್ಣಪ್ಪ ಸ್ವಾಮಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಅಸಂಖ್ಯಾತ ಭಕ್ತರಲ್ಲಿ ಗೊಂದಲ ಸೃಷ್ಟಿಸುವ ಷಡ್ಯಂತ್ರವೂ ನಡೆದಿದೆ ಎಂದು ತಿಳಿಸಿದರು.

ಎಡಪಂಥೀಯರ ಗುಂಪುಗಳ ಒತ್ತಡಕ್ಕೆ ಮಣಿದು ಎಸ್‍ಐಟಿ ರಚಿಸಿದ್ದಾರೆ ಎಂಬ ಮಾಹಿತಿಯನ್ನು ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ ಎಂದು ಮಾಧ್ಯಮಗಳ ಗಮನಕ್ಕೆ ತಂದರು. ಧರ್ಮಸ್ಥಳದ ಬಗ್ಗೆ ಇನ್ನೆಷ್ಟು ಅಪಪ್ರಚಾರ ನಡೆಯಬೇಕು ಎಂದು ಅವರು ಪ್ರಶ್ನೆಯನ್ನು ಮುಂದಿಟ್ಟರು. ಈ ಅಪಪ್ರಚಾರದ ಹಿಂದಿನ ಶಕ್ತಿಗಳ ಕುರಿತು ಸರಕಾರ ತನಿಖೆ ನಡೆಸಬೇಕಿದೆ ಎಂದು ಒತ್ತಾಯಿಸಿದರು.

ಪ್ರಶ್ನೆಗೆ ಉತ್ತರ ಕೊಟ್ಟ ಅವರು, ನಾನೂ ಧರ್ಮಸ್ಥಳ ಮಂಜುನಾಥೇಶ್ವರನ ಪರಮ ಭಕ್ತ ಎಂದು ಡಿ.ಸಿ.ಎಂ ಡಿ.ಕೆ.ಶಿವಕುಮಾರ್ ಅವರು ಮೊನ್ನೆ ಸದನದಲ್ಲೂ ಹೇಳಿದ್ದಾರೆ. ಅವರು ನಿಜಕ್ಕೂ ಪರಮ ಭಕ್ತನಾಗಿದ್ದರೆ ತಡ ಮಾಡದೇ ಪಿತೂರಿ, ಷಡ್ಯಂತ್ರದ ಹಿಂದೆ ಇರುವವರ ಬಗ್ಗೆ ಮಾಹಿತಿ ಬಹಿರಂಗಪಡಿಸಬೇಕು ಎಂದು ಆಗ್ರಹವನ್ನು ಮುಂದಿಟ್ಟರು.

ನಿಷ್ಪಕ್ಷಪಾತ- ಪಾರದರ್ಶಕ ತನಿಖೆಗೆ ಬಿಜೆಪಿ ಒತ್ತಾಯಿಸಿತ್ತು. ಬಿಜೆಪಿ ರಾಜಕಾರಣ ಮಾಡಿದ್ದರೆ ಇಷ್ಟು ದಿನ ಕಾಯುವ ಅವಶ್ಯಕತೆ ಇರಲಿಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಇವತ್ತು ಕೋಟ್ಯಂತರ ಭಕ್ತರು ನೋವಿನಲ್ಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು. ಷಡ್ಯಂತ್ರ ಎಂದಿರುವ ಉಪ ಮುಖ್ಯಮಂತ್ರಿಗಳು ಆ ಷಡ್ಯಂತ್ರವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ಇದರ ಹಿಂದೆ ಎಡಪಂಥೀಯ ಸಂಘಟನೆಗಳಿರುವ ಕುರಿತು ಸ್ವತಃ ಸಚಿವ ದಿನೇಶ್ ಗುಂಡೂರಾವ್ ಅವರೇ ಹೇಳಿದ್ದಾರೆ. ಇದೆಲ್ಲವುಗಳ ಕುರಿತು ಸಮಗ್ರ ತನಿಖೆ ನಡೆಯಲಿ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ತನಿಖೆ ಕುರಿತು ಮಧ್ಯಂತರ ವರದಿಯನ್ನು ರಾಜ್ಯ ಸರಕಾರ ಮಂಡಿಸಬೇಕೆಂದು ಸದನದಲ್ಲೂ ಆಗ್ರಹಿಸಿದ್ದೇವೆ ಎಂದು ಗಮನ ಸೆಳೆದರು. ಹುಚ್ಚಾಟ ನಿಲ್ಲಿಸಿ ಎಂದು ಅವರು ಒತ್ತಾಯಿಸಿದರು.

ತನಿಖೆ ವಿಚಾರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರದಿಂದ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು ನೊಂದಿರುವುದು ಗೊತ್ತಾಗುತ್ತದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಹಿಂದೂ ಧರ್ಮ, ಪರಂಪರೆ, ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಶ್ರೀ ಕ್ಷೇತ್ರದ ಅಸಂಖ್ಯಾತ ಭಕ್ತರ ಭಾವನೆಗಳಿಗೆ ಧಕ್ಕೆ ಬರಬಾರದು ಎಂಬುದೇ ನಮ್ಮೆಲ್ಲರ ಮೂಲ ಉದ್ದೇಶ ಎಂದು ಅವರು ನುಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮತ ಕಳ್ಳತನ ಆರೋಪಕ್ಕೆ ಪ್ರತಿಕ್ರಿಯೆಗೆ ಚುನಾವಣಾ ಆಯೋಗ ಸಜ್ಜು: ಕೆಲವೇ ಕ್ಷಣಗಳಲ್ಲಿ ಮಹತ್ವದ ಸುದ್ದಿಗೋಷ್ಠಿ