Select Your Language

Notifications

webdunia
webdunia
webdunia
webdunia

ಧರ್ಮಸ್ಥಳ ವಿಚಾರದಲ್ಲಿ ಕ್ಷಮೆ ಕೇಳಿ ಸಿಎಂ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

Chalavadi Narayanaswamy

Krishnaveni K

ಬೆಂಗಳೂರು , ಶನಿವಾರ, 16 ಆಗಸ್ಟ್ 2025 (17:11 IST)
ಬೆಂಗಳೂರು: ಧರ್ಮಸ್ಥಳದ ವಿಚಾರದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಜನರ ಕ್ಷಮೆ ಕೇಳಿ ರಾಜೀನಾಮೆ ನೀಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯ ಕಾರ್ಯಾಲಯ ‘ಜಗನ್ನಾಥ ಭವನದಲ್ಲಿ’ ಇಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಅಲ್ಲಿ ಏನೂ ಸಿಗದ ಕಾರಣ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಹೇಳುತ್ತಿದ್ದಾರೆ. ಮುಖಂಡ ಡಿ.ಕೆ ಸುರೇಶ್ ಅವರು ಧರ್ಮಸ್ಥಳ ಧಾರ್ಮಿಕ ಭಾವನೆಗಳ ಕ್ಷೇತ್ರ. ಈ ರೀತಿಯ ಘಟನೆ ಆಗಬಾರದಾಗಿತ್ತು ಎಂದು ಹೇಳುತ್ತಿದ್ದಾರೆ ಎಂದರು. 

ಕಾಂಗ್ರೆಸ್ ಪಕ್ಷದವರು ಧರ್ಮಸ್ಥಳದಲ್ಲಿ ತನಿಖೆ ನಡೆಸಿ ಏನೂ ಸಿಗಲಿಲ್ಲ. ತಪ್ಪು ಮಾಡಿ ಸಿಕ್ಕಿಹಾಕಿಕೊಂಡಿದ್ದೇವೆ. ಅದಕ್ಕಾಗಿ ನಿರೀಕ್ಷಣಾ ಜಾಮೀನು ಪಡೆಯುವ ರೀತಿಯಲ್ಲಿ ಧರ್ಮಸ್ಥಳ ಪ್ರಕರಣ ಒಂದು ಷಡ್ಯಂತ್ರ. ಇದಕ್ಕೆ ಕಮ್ಯುನಿಸ್ಟರು ಕಾರಣ. ಅವರ ಒತ್ತಾಯದ ಮೇಲೆ ನಾವು ಎಸ್‍ಐಟಿಯನ್ನು ರಚಿಸಿದ್ದೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ ಎಂದು ತಿಳಿಸಿದರು. ರಾಜ್ಯ ಸರ್ಕಾರ ಆರ್‍ಸಿಬಿ ಕಪ್ ಗೆದ್ದಾಗ ಮುಂದಾಲೋಚನೆ ಇಲ್ಲದೆ ತಪ್ಪು ಮಾಡಿ ಕಾಲ್ತುಳಿತದಿಂದ 11 ಜನರ ಮರಣಕ್ಕೆ ಕಾರಣವಾಯಿತು. ಇಂತಹ ತಪ್ಪು ಮಾಡಿದ್ದ ಕಾಂಗ್ರೆಸ್ ಸರ್ಕಾರ ಪ್ರಸ್ತುತ ಮತ್ತೊಂದು ಎಡವಟ್ಟನ್ನು ಮಾಡುವುದಕ್ಕೆ ಹೊರಟಿದೆ ಎಂದು ಆಕ್ಷೇಪಿಸಿದರು. 

ಧರ್ಮಸ್ಥಳ ಒಂದು ಪವಿತ್ರ ಧಾರ್ಮಿಕ ಸ್ಥಳ. ಇಡೀ ರಾಜ್ಯದ ಸಾಮಾನ್ಯ ಜನರೂ ಶ್ರೀ ಮಂಜುನಾಥನ ಕೃಪೆಗೆ ಪಾತ್ರರಾಗಿ ಭಕ್ತಿಯಿಂದ ದರ್ಶನ ಪಡೆಯುವ ಕಾರ್ಯವನ್ನು ಕಾಲದಿಂದಲೂ ಮಾಡಿಕೊಂಡು ಬಂದಿದ್ದಾರೆ. ಆದರೆ ಒಂದು ಧಾರ್ಮಿಕ ಸ್ಥಳದ ವಿಚಾರದಲ್ಲಿ ತಪ್ಪು ಕಲ್ಪನೆ ಮತ್ತು ಅಪವಾದ ಮಾಡಲು ಇಂದು ಕೆಲವರು ಪ್ರಚೋದನೆಯನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಗುಂಪು ಶಬರಿಮಲೆಯಲ್ಲೂ ಅಪಪ್ರಚಾರದ ಕೆಲಸ ಮಾಡಿತ್ತು. ಅಲ್ಲಿ ಏನೂ ಪ್ರಯೋಜನವಾಗಲಿಲ್ಲ. ಇನ್ನಷ್ಟು ಭಕ್ತರು ಹೆಚ್ಚಾದರು. ಪ್ರಸ್ತುತ ಅದೇ ಗುಂಪು ಧರ್ಮಸ್ಥಳದ ವಿರೋಧವಾಗಿ ಕೂಡ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ದೂರಿದರು. 
 
ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವಾಗಿ ಉಳಿದಿಲ್ಲ. ಅದು ಕಮ್ಯುನಿಸ್ಟ್ ಕಾಂಗ್ರೆಸ್ ಪಕ್ಷವಾಗಿ ಕೆಲಸ ಮಾಡುವುದಕ್ಕೆ ಪ್ರಾರಂಭಿಸಿದೆ ಎಂದು ಅವರು ಟೀಕಿಸಿದರು. ಕಮ್ಯುನಿಸ್ಟ್ ಚಿಂತನೆಗಳನ್ನು ಅವರು ಪೈಪೋಟಿಯಿಂದ ಮುಖ್ಯಮಂತ್ರಿ ಮೂಲಕ ಮಾಡಿಸುವುದಕ್ಕೆ ಹೊರಟಿದ್ದಾರೆ. ಈ ಕಾರಣದಿಂದ ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ಹುಟ್ಟಿಕೊಂಡಿದ್ದಾನೆ ಎಂದು ತಿಳಿಸಿದರು.

ಅನಾಮಿಕ ವ್ಯಕ್ತಿಯನ್ನು ಮುಂದಿಟ್ಟು ಧರ್ಮಸ್ಥಳದಲ್ಲಿ 13 ಸ್ಥಳಗಳನ್ನು ಗುರುತಿಸಿ, ಆ ಸ್ಥಳಗಳಲ್ಲಿ ನಾವು ಹೆಣಗಳನ್ನು ಹೂತು ಹಾಕಿದ್ದೇವೆ. ಇದೆಲ್ಲವನ್ನು ಅಗೆದು ತೆಗೆದರೆ ನಾವು ಸಾಕ್ಷಿ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಯಾವುದೇ ಒಬ್ಬ ಅನಾಮಿಕ ವ್ಯಕ್ತಿ ದೂರು ನೀಡಿದಾಗ ಮೊದಲು ಅವನನ್ನು ಬಂಧಿಸಿ ಎಫ್‍ಐಆರ್ ಹಾಕಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವನನ್ನು ಜೈಲಿಗೆ ಕಳುಹಿಸಬೇಕು. ಅವಶ್ಯಕತೆ ಇದ್ದರೆ ಅವನನ್ನು ವಿಚಾರಣೆಗೆ ಒಳಪಡಿಸಬೇಕು. ಆದರೆ ಈ ಸರ್ಕಾರ ಅನಾಮಿಕ ವ್ಯಕ್ತಿಯನ್ನು ಚಾಂಪಿಯನ್ನಾಗಿ ಮಾಡಿದೆ ಎಂದು ಆಕ್ಷೇಪಿಸಿದರು.

ಎಸ್‍ಐಟಿ ಮುಖ್ಯಸ್ಥರು ಪೊಲೀಸ್ ಅಧಿಕಾರಿಗಳು ಅಲ್ಲ. ಎಸ್‍ಐಟಿ ಗೆ ಅನಾಮಿಕನೇ ಮುಖ್ಯಸ್ಥನಾಗಿದ್ದಾನೆ ಎಂದು ಆರೋಪಿಸಿದರು. ಇಡೀ ಎಸ್‍ಐಟಿ ಅನಾಮಿಕನ ಕೈಕೆಳಗೆ ಕೆಲಸವನ್ನು ಮಾಡಬೇಕು ಮತ್ತು ಆತ ಹೇಳಿದಂತೆ ನಡೆದುಕೊಳ್ಳಬೇಕು ಎಂಬ ವಾತಾವರಣವನ್ನು ಸರ್ಕಾರ ಹುಟ್ಟಿಹಾಕಿದೆ ಎಂದು ದೂರಿದರು.
ಆರೆಸ್ಸೆಸ್ ಅನ್ನು ಪ್ರಧಾನಿಯವರು ಮೆಚ್ಚಿಕೊಂಡ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಧಾನಿಯವರ ಕಾರ್ಯವನ್ನು ಸಮರ್ಥಿಸಿದರು. ನಮಗೆ ದೇಶ ಮೊದಲು; ದೇಶ ಮೊದಲು ಎಂಬುದು ಕಾಂಗ್ರೆಸ್ಸಿನವರ ರಕ್ತದಲ್ಲೇ ಇಲ್ಲ; ಯಾವುದೇ ದೇಶಭಕ್ತ ಸಂಘಟನೆಯನ್ನು ನಾವು ಶ್ಲಾಘಿಸುತ್ತೇವೆ. ಬಾಂಬ್ ಹಿಡಿದು ಓಡಾಡುವವರು, ದೇಶದ್ರೋಹದ ಕೆಲಸ ಮಾಡುವವರ ಜೊತೆ ಕಾಂಗ್ರೆಸ್ಸಿನವರು ಸಂಪರ್ಕವಿದ್ದು, ಅವರ ಮೇಲೆ ಪ್ರೀತಿ ಇಟ್ಟುಕೊಂಡವರು ಎಂದು ಟೀಕಿಸಿದರು.
 
 

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ ನಾನೇ ನಂ 1 ಗೃಹಸಚಿವ, ಹೇಳ್ಕೊಳ್ಳೋರು ಹೇಳ್ಕೊಳ್ಳಿ: ಡಾ ಜಿ ಪರಮೇಶ್ವರ್