ಬೆಂಗಳೂರು: ಬಿಜೆಪಿ ಯಲಹಂಕ ವತಿಯಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ನೆಲಮಂಗಲ ಟೋಲ್‍ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತನಕ ನಡೆಯುವ “ಧರ್ಮಸ್ಥಳ ಚಲೋ” ಅಭಿಯಾನಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು.
ಧರ್ಮಸ್ಥಳದಲ್ಲಿ ನೂರಾರು ಹತ್ಯೆ ನಡೆದಿದೆ ಎಂದು ಅನಾಮಿಕ ನೀಡಿದ ದೂರಿನನ್ವಯ ತನಿಖೆ ನಡೆಯುತ್ತಿದೆ. ಎಸ್ಐಟಿ ತಂಡಕ್ಕೆ ಇದುವರೆಗೆ ಅನಾಮಿಕ ದೂರುದಾರ ಹೇಳಿದಂತೆ ಮಹಿಳೆಯರ ಅಸ್ಥಿಪಂಜರ ಸಿಕ್ಕಿಲ್ಲ. ಈ ಹಿನ್ನಲೆಯಲ್ಲಿ ಅನಾಮಿಕನ ವಿರುದ್ಧವೇ ಅನುಮಾನ ವ್ಯಕ್ತವಾಗುತ್ತಿದೆ.
ಇದೆಲ್ಲಾ ಹಿಂದೂಗಳ ಧಾರ್ಮಿಕ ಕೇಂದ್ರ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುವ ಕಮ್ಯುನಿಸ್ಟರ ಯತ್ನ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಚಲೋ ಅಭಿಯಾನ ಹಮ್ಮಿಕೊಂಡಿದೆ.
ಅದರಂಥೆ ಇಂದು ಪೂಜಾ ವಿಧಿವಿಧಾನ ನೆರವೇರಿಸಿ ನೂರಾರು ವಾಹನಗಳ ಅಭಿಯಾನವನ್ನು ಆರಂಭಿಸಲಾಯಿತು. ಅಪಪ್ರಚಾರ ಖಂಡಿಸಿ ಯಾತ್ರೆ ನಡೆಯುತ್ತಿದ್ದು, ಸಂಜೆ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯಲಿದ್ದಾರೆ. ಶಾಸಕ ಎಸ್.ಆರ್. ವಿಶ್ವನಾಥ್, ಹಾಲು ಪ್ರಕೋಷ್ಠದ ರಾಜ್ಯ ಸಂಚಾಲಕ ಬೇಲೂರು ರಾಘವೇಂದ್ರ ಶೆಟ್ಟಿ, ಪ್ರಮುಖರು, ಕಾರ್ಯಕರ್ತರು, ಅಭಿಮಾನಿಗಳು ಇದ್ದರು.