ಬೆಂಗಳೂರು: ಕೆಆರ್ ಎಸ್ ಡ್ಯಾಮ್ ನಿರ್ಮಾಣ ಮಾಡುವ ಯೋಜನೆ ಟಿಪ್ಪು ಸುಲ್ತಾನ್ ಗಿತ್ತು ಎಂದಿದ್ದ ಸಚಿವ ಜಮೀರ್ ಅಹ್ಮದ್ ಗೆ ರಾಜ್ಯ ಬಿಜೆಪಿ ಟಾಂಗ್ ಕೊಟ್ಟಿದೆ.
ಸಚಿವ ಮಹದೇವಪ್ಪ ಕೆಆರ್ ಎಸ್ ಡ್ಯಾಮ್ ಗೆ ಮೊದಲು ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಇದನ್ನು ಸಚಿವ ಜಮೀರ್ ಅಹ್ಮದ್ ಕೂಡಾ ಸಮರ್ಥಿಸಿಕೊಂಡಿದ್ದರು. ಕೆಆರ್ ಎಸ್ ಡ್ಯಾಮ್ ನಿರ್ಮಾಣ ಮಾಡುವ ಯೋಜನೆ ಟಿಪ್ಪುಗಿತ್ತು ಎಂದಿದ್ದರು.
ಇದಕ್ಕೀಗ ಬಿಜೆಪಿ ಎಕ್ಸ್ ಮೂಲಕ ತಿರುಗೇಟು ಕೊಟ್ಟಿದೆ. ನವ ಮೈಸೂರಿನ ನಿರ್ಮಾತೃ ಮೈಸೂರು ಸಂಸ್ಥಾನದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮುಂದುವರಿಸುತ್ತಿದೆ. ಮುಸ್ಲಿಂ ವೋಟ್ ಬ್ಯಾಂಕ್‌ಗಾಗಿ ಟಿಪ್ಪುವನ್ನು ಆರಾಧಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.
ಹಿಂದೂಗಳ ನರಮೇಧ ನಡೆಸಿದ, ರಾಜ್ಯದಲ್ಲಿ ಪರ್ಷಿಯನ್ ಭಾಷೆ ಹೇರಿದ, ಮದಕರಿ ವಂಶಸ್ಥರಿಗೆ ಚೂರಿ ಹಾಕಿದ ಹೈದರಾಲಿಯ ಮನೆತನವನ್ನು ಕಾಂಗ್ರೆಸ್ ಇಂದು ಭಜಿಸುತ್ತಿದೆ.
ಜಮೀರ್ ಅಹ್ಮದ್ ಅವರೇ, ಟಿಪ್ಪು ಸತ್ತು ಹಲವು ದಶಕಗಳ ಬಳಿಕ ನಿರ್ಮಾಣವಾದ ಕೆಆರ್‌ಎಸ್ ನಿರ್ಮಾಣದ ಕೊಡುಗೆಯನ್ನು ಟಿಪ್ಪು ಯೋಚನೆಯಂತೆ ಬಿಂಬಿಸುವುದು ಹಾಸ್ಯಾಸ್ಪದ. ಡ್ಯಾಮ್ ನಿರ್ಮಾಣ ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಅನ್ನಭಾಗ್ಯ ಲೇಬಲ್ ಹಚ್ಚಿದಂತೆ ಅಲ್ಲ ಎಂಬುದು ನೆನಪಿರಲಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.