Select Your Language

Notifications

webdunia
webdunia
webdunia
webdunia

ಕರ್ನಾಟಕದಲ್ಲಿ ಅತ್ಯಾಚಾರಿಗಳ, ಭ್ರಷ್ಟರ ರಕ್ಷಣೆ ನಡೆಯುತ್ತಿದೆ: ಶೆಹಜಾದ್ ಪೂನಾವಾಲ

Shehjad Poonawala

Krishnaveni K

ಬೆಂಗಳೂರು , ಶುಕ್ರವಾರ, 16 ಆಗಸ್ಟ್ 2024 (16:04 IST)
ಬೆಂಗಳೂರು: ಕರ್ನಾಟಕದಲ್ಲಿ ಅತ್ಯಾಚಾರಿಗಳ ರಕ್ಷಣೆ, ಭ್ರಷ್ಟರ ರಕ್ಷಣೆ ನಡೆದಿದೆ. ಇದು ಕಾಂಗ್ರೆಸ್- ‘ಇಂಡಿ’ ಒಕ್ಕೂಟದ ಕಾರ್ಯತಂತ್ರ ಎಂದು ಜೆಪಿ ರಾಷ್ಟೀಯ ವಕ್ತಾರ ಶೆಹಜಾದ್ ಪೂನಾವಾಲಾ ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ಮಲಿಕ್ ನಿಂದ 11 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ನೇಹಾ ಹಿರೇಮಠ್ ಹತ್ಯೆ ಪ್ರಕರಣ ಸೇರಿ ಹಲವಾರು ಪ್ರಕರಣಗಳು ನಡೆದಿವೆ. ಇವುಗಳ ಕುರಿತು ರಾಹುಲ್, ಪ್ರಿಯಾಂಕ ವಾಧ್ರಾ ಯಾಕೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.

ಕರ್ನಾಟಕದ್ದು ಡಬಲ್ ಟ್ರಬಲ್ ಸರಕಾರ. ಕರ್ನಾಟಕದಲ್ಲಿ ಕಟಾಕಟ್ ಲೂಟ್, ಝೂಟ್, ಪೂಟ್ ಸರಕಾರ ಇದೆ. 1947ರಿಂದ ಜೀಪ್ ಹಗರಣದಿಂದ ಆರೋಗ್ಯ ಕ್ಷೇತ್ರದ ವರೆಗೆ ಹಗರಣಗಳು ನಡೆದಿವೆ. ರಾಹುಲ್ ಗಾಂಧಿ ಕಟಾಕಟ್ ಲೂಟ್ ಗ್ಯಾರಂಟಿ ಯೋಜನೆ ಇದು. ಮೂಡ ನಿವೇಶನ ಹಗರಣದಡಿ 5 ಸಾವಿರ ಕೋಟಿಯ ಹಗರಣ ನಡೆದಿದೆ ಎಂದು ದೂರಿದರು.

ಇದು ಪಿಕ್ ಪಾಕೆಟ್ ಸರಕಾರ..
ಮೊಟ್ಟೆ ಹಗರಣವೂ ನಡೆಯುತ್ತಿದೆ. ಆ ಹಣವನ್ನೂ ಹೈಕಮಾಂಡ್‌ಗೆ ಕಳಿಸುವ ಸಾಧ್ಯತೆ ಇದೆ ಎಂದರು. ಗ್ಯಾರಂಟಿ ಬಗ್ಗೆ ಮಾತನಾಡಿದ ಮಹಿಳೆಯರ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ರೇಗಾಡುವ ವಿಡಿಯೋ ವೈರಲ್ ಆಗಿದೆ. ಗ್ಯಾರಂಟಿ ವಿರುದ್ಧ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಮಾತನಾಡಿದ್ದಾರೆ, ನಾವು ದಿವಾಳಿ ಆಗುತ್ತೇವೆ ಎಂದು ಹೇಳಿದ್ದಾರೆ ಎಂದು ಶೆಹಜಾದ್ ಪೂನಾವಾಲಾ ತಿಳಿಸಿದರು
.
ಲೂಟಿ ಮತ್ತು ಸುಳ್ಳು ಗ್ಯಾರಂಟಿಗಳಿದ ರಾಜ್ಯ ದಿವಾಳಿ ಆಗಿದೆ. ಇದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸರಕಾರವು ಜನರ ಮೇಲೆ ನ್ಯಾಯಸಮ್ಮತವಲ್ಲದ ಜಿಝಿಯಾ ತೆರಿಗೆ ಹಾಕಲು ಸರಕಾರ ಮುಂದಾಗಿದೆ. ಪೆಟ್ರೋಲ್, ಡೀಸೆಲ್, ವಿದ್ಯುತ್, ಬಸ್ ಪ್ರಯಾಣದರ, ನೀರಿನ ದರ, ಸಿನಿಮಾ ಟಿಕೆಟ್, ಸೇರಿ ಎಲ್ಲೆಡೆ ಹೆಚ್ಚುವರಿ ತೆರಿಗೆ ವಿಧಿಸಿದ್ದಾರೆ. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದಾರೆ. ಎಸ್‌ಸಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟ ಸುಮಾರು 25 ಸಾವಿರ ಕೋಟಿ ಹಣವನ್ನೂ ಬೇರೆಡೆಗೆ ವರ್ಗಾಯಿಸಿ ಲೂಟಿ ಮಾಡಲಾಗಿದೆ. ಇದು ಪಿಕ್ ಪಾಕೆಟ್ ಸರಕಾರ ಎಂದು ಅವರು ಟೀಕಿಸಿದರು. ಕರ್ನಾಟಕದಲ್ಲಿ 1200 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಈ ಕುರಿತು ಕಾಂಗ್ರೆಸ್ಸಿಗರು ಮಾತನಾಡುವುದಿಲ್ಲ ಎಂದು ದೂರಿದರು.

ವಾಲ್ಮೀಕಿ ನಿಗಮದಡಿ ಅಧಿಕಾರಿಯೊಬ್ಬರು ಸಚಿವರ ಹೆಸರು ತಿಳಿಸಿ ಆತ್ಮಹತ್ಯೆ ಮಾಡಿದ್ದಾರೆ. 187 ಕೋಟಿಯ ಲೂಟಿ ನಡೆದಿದೆ. ಆದಿವಾಸಿಗಳಿಗಾಗಿ ತಮ್ಮ ಮನ ಮಿಡಿಯುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಇಲ್ಲಿ ಆದಿವಾಸಿಗಳ ಹಣ ಲೂಟಿ ಆಗುತ್ತಿದೆ. ಲಿಕ್ಕರ್, ಲ್ಯಾಂಬೊರ್ಗಿನಿ ಖರೀದಿಗೆ ಹಾಗೂ ಚುನಾವಣೆ ಖರ್ಚಿಗೆ ಈ ಹಣ ಬಳಸಿದ್ದಾರೆ. ಕಡಿಮೆ ಹಣದ (89 ಕೋಟಿ) ಭ್ರಷ್ಟಾಚಾರವನ್ನು ಸರಕಾರ ಒಪ್ಪಿಕೊಂಡಿದೆ. 120 ಕೋಟಿಯ ಅಕ್ಕಿ ಹಗರಣವೂ ಆಗುತ್ತಿದೆ. ಒಂದೊಂದು ಇಲಾಖೆ ಒಂದೊAದು ದರದಲ್ಲಿ ಖರೀದಿ ಮಾಡುತ್ತಿದೆ ಎಂಬ ಮಾಹಿತಿ ಇದೆ ಎಂದು ವಿವರಿಸಿದರು.

ಟ್ರಾನ್ಸ್ಫರ್ ದಂಧೆಯೂ ನಡೆದಿದೆ. ದಲಿತ ಸಮುದಾಯದ ಸಬ್ ಇನ್‌ಸ್ಪೆಕ್ಟರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಕಾಂಗ್ರೆಸ್ ಶಾಸಕರನ್ನು ಹೆಸರಿಸಿದ್ದಾರೆ. ರಾಹುಲ್ ಗಾಂಧಿ ದಲಿತ್ ದಲಿತ್ ಎನ್ನುತ್ತಾರೆ. ಇಲ್ಲಿ ಮಾತ್ರ ಅದು ದಲ್ ಹಿತ್ (ನಿಶ್ಶಬ್ದ) ಆಗಿದೆ ಎಂದು ಟೀಕಿಸಿದರು. ಇದಿಷ್ಟೇ ಅಲ್ಲ; ಮೊಟ್ಟೆ ಹಗರಣವೂ ನಡೆಯುವ ಮಾಹಿತಿ ಇದೆ ಎಂದು ವಿವರಿಸಿದರು. ಮಹಿಳಾ ಸುರಕ್ಷತೆ, ಬೆಲೆ ಏರಿಕೆ, ರೈತರ ವಿಚಾರ, ಭ್ರಷ್ಟಾಚಾರ- ಈ ಎಲ್ಲ ವಿಚಾರಗಳಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರ ಮತ್ತು ಇಂಡಿ ಒಕ್ಕೂಟದ ಸಿದ್ಧಾಂತವನ್ನು ಟೀಕಿಸಿದರು. ಹೇಳೋದೊಂದು ಮಾಡುವುದು ಮತ್ತೊಂದು ಇವರ ನೀತಿ ಎಂದು ತಿಳಿಸಿದರು.

ರಾಜೀನಾಮೆಗೆ ಆಗ್ರಹ: ಕೋಲ್ಕತ್ತ- ಕರ್ನಾಟಕ- ಕನೌಜ್ ನಡುವೆ ಇಂಡಿಯನ್ನು ಒಗ್ಗೂಡಿಸುವುದು ಅತ್ಯಾಚಾರಿಗಳನ್ನು ಬಚಾವೋ ಕಾರ್ಯಕ್ರಮ ಎಂದು ಟೀಕಿಸಿದರು. ಆರೇಳು ಸಾವಿರ ಜನರನ್ನು ಕಳಿಸಿ ಹಿಂಸೆ, ಆಸ್ಪತ್ರೆಯನ್ನು ಧ್ವಂಸ ಮಾಡಲಾಗಿತ್ತು. ಹೈಕೋರ್ಟಿಗೆ ಮಮತಾ ಬ್ಯಾನರ್ಜಿ ಬಗ್ಗೆ ವಿಶ್ವಾಸವಿಲ್ಲ. ಮಮತಾ ಬ್ಯಾನರ್ಜಿಗೆ ಮುಖ್ಯಮಂತ್ರಿಯಾಗಿ ಒಂದು ನಿಮಿಷವೂ ಮುಂದುವರೆಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು. ಕೆಲದಿನಗಳ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಇಡೀ ದೇಶವನ್ನೇ ಕಂಗೆಡಿಸಿದೆ. ಈ ವಿಚಾರದಲ್ಲಿ ನಾವೆಲ್ಲರೂ ಯೋಚಿಸಬೇಕಿದೆ ಎಂದು ತಿಳಿಸಿದರು.

ಪಶ್ಚಿಮ ಬಂಗಾಲ ರಾಜ್ಯ ಪ್ರಾಯೋಜಿತ ಹಿಂಸಾಚಾರ...
ಆ.14ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಸಾವಿರಾರು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ವೈದ್ಯೆಯ ಸ್ಥಿತಿ ಇತರರಿಗೂ ಆಗಲಿದೆ ಎಂದು ಮಹಿಳಾ ವೈದ್ಯರಿಗೆ ಬೆದರಿಕೆ ಒಡ್ಡಲಾಗಿದೆ ಎಂದು ನೋವಿನಿಂದ ನುಡಿದರು. ಸಾಕ್ಷ್ಯ ನಾಶಕ್ಕಾಗಿಯೇ ಮೆಡಿಕಲ್ ಕಾಲೇಜಿನಲ್ಲಿ ಈ ಹಲ್ಲೆ, ಹಿಂಸಾಚಾರ ನಡೆದಿದೆ. ಇದು ಪಶ್ಚಿಮ ಬಂಗಾಲದ ರಾಜ್ಯ ಪ್ರಾಯೋಜಿತ ಹಿಂಸಾಚಾರ ಎಂದು ಶೆಹಜಾದ್ ಪೂನಾವಾಲಾ ಅವರು ಟೀಕಿಸಿದರು.

ಬಂಗಾಲದ ನಿರ್ಭಯಾ ದುರ್ಘಟನೆ ಇದೆಂದು ಸೋಷಿಯಲ್ ಮೀಡಿಯದಲ್ಲಿ ತಿಳಿಸಲಾಗುತ್ತಿದೆ. ಆರೋಪಿಗೆ ವ್ಯವಸ್ಥಿತವಾಗಿ ಸಹಾಯ ಕೊಡಲಾಗುತ್ತಿದೆ. ಪಶ್ಚಿಮ ಬಂಗಾಲದಲ್ಲಿ ಈಗ ಕೇವಲ ಬಲಾತ್ಕಾರಿಗಳು ಮಾತ್ರ ಸುರಕ್ಷಿತರು ಎಂದು ಟೀಕಿಸಿದರು. ಕಲ್ಕತ್ತವು ಸಿಟಿ ಆಫ್ ಜಾಯ್ ಆಗಿಲ್ಲ; ಅದು ಆತಂಕ- ಭಯದ ನಗರವಾಗಿದೆ ಎಂದು ವಿವರಿಸಿದರು.

ಶಾಂತಿಯುತ ಪ್ರತಿಭಟನೆಯ ಸ್ವರೂಪಕ್ಕೆ ಹಿಂಸಾತ್ಮಕ ಎಂಬ ಬೇರೊಂದು ರೀತಿಯ ಬಣ್ಣ ನೀಡಲು ಮುಂದಾಗಿದ್ದಾರೆ ಎಂದು ಆಕ್ಷೇಪಿಸಿದರು. ಸಾಕ್ಷಿ ನಾಶಕ್ಕಾಗಿ ಪ್ರಯತ್ನ ನಡೆಸಲಾಗಿದೆ. ಆರಂಭದಲ್ಲಿ ಪೋಷಕರಿಗೆ ವೈದ್ಯೆಯ ಆತ್ಮಹತ್ಯೆ ಎಂದೇ ತಿಳಿಸಲಾಗಿತ್ತು. ದುರ್ಘಟನೆ ನಡೆದ ಕೂಡಲೇ ಸಂದೀಪ್ ಘೋಷ್‌ಗೆ ಇನ್ನೊಂದು ದೊಡ್ಡ ವೈದ್ಯ ಕಾಲೇಜಿನ ಪ್ರಾಂಶುಪಾಲರಾಗಿ ಮಾಡಲಾಗಿತ್ತು. ಇವರ ವಿರುದ್ಧ ಮಾತನಾಡಿದ ಟಿಎಂಸಿ ಸಂಸದ, ಮುಖ್ಯ ವಕ್ತಾರ ಶಾಂತನು ಸೇನ್ ರನ್ನು ವಜಾ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಒಬ್ಬರೇ ಅತ್ಯಾಚಾರ ಮಾಡಿದ್ದಾಗಿ ಬಿಂಬಿಸಲು ಬಂಗಾಲ ಪೊಲೀಸರು ಮುಂದಾಗಿದ್ದರು. ಇದುವೇ ಫ್ಯಾಸಿಸಂ ಎಂದು ರಾಹುಲ್ ಗಾಂಧಿ ಅವರ ಗಮನ ಸೆಳೆದರು. ಅತ್ಯಾಚಾರ ಸಂಬಂಧ ಟ್ವೀಟ್ ಮಾಡಿದವರಿಗೆ ನೋಟಿಸ್ ಕೊಡುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯೆ ಮೇಲಿನ ಅತ್ಯಾಚಾರ ಸಂಬಂಧ ಕಲ್ಕತ್ತ ಹೈಕೋರ್ಟ್ ಮಮತಾ ಬ್ಯಾನರ್ಜಿ ರಾಜ್ಯ ಸರಕಾರಕ್ಕೆ ಮತ್ತೆ ಚಾಟಿಯೇಟು ನೀಡಿದೆ. ಬಲಾತ್ಕಾರ, ಮರ್ಡರ್, ಕವರ್ ಅಪ್ ಬಗ್ಗೆ ಅದು ಪ್ರಸ್ತಾಪಿಸಿದೆ. ಪಶ್ಚಿಮ ಬಂಗಾಲ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಅದು ತಿಳಿಸಿದೆ ಎಂದರು.

ಟಿ ಸಿ ಮೊದಲು ರಚಿಸಿದ ತನಿಖಾ ಸಮಿತಿಯಲ್ಲಿ ಟಿಎಂಸಿಯವರೂ ಇದ್ದರು. ಪೋಷಕರನ್ನು ಬೆದರಿಸಿ ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದರು. ಹಲ್ಲೆ ನಡೆಸಿರಲಿಲ್ಲ ಎಂದು ತಿಳಿಸುವ ಉದ್ದೇಶವಿತ್ತು. ಸಾಕ್ಷ್ಯ ನಾಶಕ್ಕಾಗಿಯೇ ಇದನ್ನು ಸಿಬಿಐಗೆ ಕೊಡಲು ಮಮತಾ ಬ್ಯಾನರ್ಜಿ ಸಿದ್ಧರಿರಲಿಲ್ಲ ಎಂದು ದೂರಿದರು. ಮಾಧ್ಯಮಗಳನ್ನು, ನಮ್ಮನ್ನು ಮೂರ್ಖರನ್ನಾಗಿಸಲು ನಾವೇನು ಮಕ್ಕಳೇ? ಎಂದು ಪ್ರಶ್ನಿಸಿದರು.
ಅತ್ಯಾಚಾರ ಕೇಸಿನಲ್ಲಿ ರಾಮನ ಹೆಸರನ್ನು ತರುತ್ತಿದ್ದಾರೆ. ಇಲ್ಲಿ ಹಿಂದೂ ವಿರೋಧಿ ಧೋರಣೆ ಮುಂದುವರೆಸಿದ್ದಾರೆ; ಮಮತಾ ಬ್ಯಾನರ್ಜಿ ಯಾರ ವಿರುದ್ಧ ಪ್ರತಿಭಟನೆ ಮಾಡುತ್ತಾರೆ? ಎಂದು ಕೇಳಿದ ಅವರು, ರಾಹುಲ್‌ಜೀ ಅವರು ಈ ವಿಚಾರದಲ್ಲಿ ಒಂದು ಟ್ವೀಟ್ ಮಾತ್ರ ಮಾಡಿದ್ದಾರೆ. ಮಮತಾ ರಾಜೀನಾಮೆ ಕೇಳಿಲ್ಲ. ಇದು ಎ- ಅಪರಾಧಿ ಬಚಾವೋ, ಬಿ- ಬ್ಲೇಮ್ ಗೇಮ್ ಎಂದೂ ದೂರಿದರು. ನಿನ್ನೆ ಮತ್ತೊಂದು ಇಂಥದ್ದೇ ದುರ್ಘಟನೆ ನಡೆದಿದೆ. ಪಶ್ಚಿಮ ಬಂಗಾಲವು ಮಹಿಳಾ ಸಿಎಂ ಹೊಂದಿದ್ದರೂ ತಾಲಿಬಾನಿ ಮಾನಸಿಕತೆ ಮತ್ತು ಕಲ್ಚರ್ (ಟಿಎಂಸಿ) ಇರುವ ಅಧಿಕಾರವಿದೆ ಎಂದು ಆರೋಪಿಸಿದರು.

 
ಪಶ್ಚಿಮ ಬಂಗಾಲದ ಸಂದೇಶ್‌ಖಲಿ ಅತ್ಯಾಚಾರ, ವೈದ್ಯೆ ಮೇಲಿನ ಅತ್ಯಾಚಾರ, ಆಪ್ ಮುಖಂಡರಾದ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ನಿಮ್ಮ ನಿಲುವೇನು ಎಂದು ತಿಳಿಸಿ ಎಂದು ರಾಹುಲ್, ಪ್ರಿಯಾಂಕ ವಾಧ್ರಾ ಅವರನ್ನು ಪ್ರಶ್ನಿಸಿದರು. ‘ಇಂಡಿ’ ಪಕ್ಷಗಳು ಕೂಡ ಈ ವಿಷಯದಲ್ಲಿ ತಮ್ಮ ನಿಲುವನ್ನು ತಿಳಿಸಬೇಕಿದೆ ಎಂದು ಆಗ್ರಹಿಸಿದರು. ಸಮಾಜವಾದಿ ಪಕ್ಷದ ಮೊಯಿದ್ ಖಾನ್, ನವಾಬ್ ಯಾದವ್ ಮೇಲಿನ ಅತ್ಯಾಚಾರ ಪ್ರಕರಣದಲ್ಲೂ ಅತ್ಯಾಚಾರಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿತ್ತು ಎಂದು ಟೀಕಿಸಿದರು.

ಸರಕಾರ ಬಲಾತ್ಕಾರಿಗಳ ಪರ ಮತ್ತು ಮಹಿಳಾ ವಿರೋಧಿ ಆಗಿದ್ದಾಗ ಅತ್ಯಾಚಾರ ಹೆಚ್ಚಾಗುತ್ತದೆ. ಇಂಡಿ ಒಕ್ಕೂಟ ಆಡಳಿತದಲ್ಲಿ ಇರುವ ಕಡೆಗಳಲ್ಲಿ ಇಂಥ ಘಟನೆಗಳು ಹೆಚ್ಚಾಗುತ್ತಿವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಪಶ್ಚಿಮ ಬಂಗಾಲದಲ್ಲಿ ರಾಷ್ಟçಪತಿ ಅಧಿಕಾರದ ಬದಲು ರಾಷ್ಟçವಾದಿ ಶಾಸನ ಬೇಕಿದೆ ಎಂದೂ ಶೆಹಜಾದ್ ಪೂನಾವಾಲಾ ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ತುರ್ತು ಸೇವೆ ಹೊರತುಪಡಿಸಿ ನಾಳೆ ವೈದ್ಯಕೀಯ ಸೇವೆಗಳಿರಲ್ಲ,