Select Your Language

Notifications

webdunia
webdunia
webdunia
webdunia

ಮತಪಟ್ಟಿಗೆ ಸೇರಿಸಲು ನಿರಾಕರಿಸಿದ್ದಕ್ಕೆ ಅನ್ಯ ಕೋಮಿನವರಿಂದ ಅಧಿಕಾರಿ ಮೇಲೆ ಹಲ್ಲೆ: ಬಿಜೆಪಿ ಆಕ್ರೋಶ

BLO assaulted
ಬೆಂಗಳೂರು: ಉತ್ತರ ಲೋಕಸಭಾ ಕ್ಷೇತ್ರದ ಪುಲಿಕೇಶಿ ನಗರ ಕ್ಷೇತ್ರದ ಡಿ.ಜೆ.ಹಳ್ಳಿ ವಾರ್ಡ್‍ನಲ್ಲಿ ಜಿಬಿಎ ನೇಮಿಸಿದ ಬೂತ್ ಅಧೀಕ್ಷಕ ಫಕೀರಪ್ಪ ಎಂಬುವರ ಮೇಲೆ ಮುಸ್ಲಿಮರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್  ಅವರು ಆರೋಪಿಸಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ವಿಫಲರಾದ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.
 
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು ಬಂಧಿಸದೆ ಕಾಂಗ್ರೆಸ್ ಸರ್ಕಾರ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದರು. ಎಲ್ಲಾ ಬಿಎಲ್‍ಒಗಳು, ಬಿಎಲ್‍ಎ-2ಗಳಿಗೆ ಸೂಕ್ತ ರಕ್ಷಣೆಗೆ ಕ್ರಮ ಆಗಬೇಕು ಎಂದು ಆಗ್ರಹಿಸಿದರು. ಶಿವಾಜಿನಗರದಲ್ಲಿ ಫುಟ್‍ಪಾತ್ ಅತಿಕ್ರಮಣ ತೆರವಿಗೆ ಹೋದಾಗ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದ್ದು, ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಜಿಬಿಎ ಹತ್ತು ಬೂತ್‍ಗಳಿಗೆ ಅಧೀಕ್ಷಕರನ್ನು ನೇಮಿಸಿದೆ. ಇದರಲ್ಲಿ ಫಕೀರಪ್ಪ  ಅವರ ಮೇಲೆ ಹಾಡಹಗಲೇ ಎಂಟು ಜನ ಮುಸ್ಲಿಮರ ಗುಂಪು ಅಟ್ಟಾಡಿಸಿ ಹಲ್ಲೆ ನಡೆಸಿದೆ. ಫಕೀರಪ್ಪ ಹಲ್ಲು ಹಾಗೂ ತುಟಿ ತುಂಡಾಗಿದೆ. ಈ ವಿಷಯ ಬಹಿರಂಗ ಮಾಡದಂತೆ ಅವರ ಮೇಲೆ ಸ್ಥಳೀಯ ಮುಸ್ಲಿಮರು ಮತ್ತು ಶಾಸಕರು ಒತ್ತಡ ಹಾಕಿದ್ದಾರೆ. ಇದರಿಂದ ಫಕೀರಪ್ಪ ಅವರು ಭೀತರಾಗಿದ್ದಾರೆ ಎಂದರು. 
 
ಮತದಾರರ ಪಟ್ಟಿಗೆ ವಾರ್ಡ್‍ನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಯರು ಮತ್ತು ಪಾಕಿಸ್ತಾನಿಯರನ್ನು ಸೇರಿಸಲು ಸ್ಥಳೀಯ ಮುಸ್ಲಿಮರು ಫಕೀರಪ್ಪ ಅವರಿಗೆ ಒತ್ತಡ ಹೇರಿದ್ದರು. ಆದರೆ ಅವರೆಲ್ಲ ಅಕ್ರಮ ನುಸುಳುಕೋರರು ಮತ್ತು ಸರಿಯಾದ ದಾಖಲೆ ಇಲ್ಲದೆ ಮತಪಟ್ಟಿಗೆ ಸೇರಿಸಲು ಆಗಲ್ಲ ಎಂದು ಹೇಳಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಅವರು, ಭಯಗೊಂಡು ಈಗ ಯಾರಿಗೂ ಸಿಕ್ಕುತ್ತಿಲ್ಲ ಎಂದರು. 
 
ಫಕೀರಪ್ಪ ಅವರ ಹಲ್ಲೆ ಸಂಬಂಧ ಮೂವರು ಅಮಾಯಕರನ್ನು ಬಂಧಿಸುವ ನಾಟಕ ನಡೆದಿದೆ. ಇಕ್ಬಾಲ್ ಎಂಬ ವ್ಯಕ್ತಿ ಇದನ್ನು ಮಾಡುತ್ತಿರುವ ಆರೋಪ ಇದೆ. ಈ ಹಿಂದೆ ಡಿ.ಜೆ.ಹಳ್ಳಿ ಗಲಭೆಯಲ್ಲಿ ಪೆÇಲೀಸ್ ಠಾಣೆ ಮೇಲೆ ದಾಳಿ ಮಾಡಿದವರೇ ಫಕೀರಪ್ಪ ಅವರ ಮೇಲೂ ದಾಳಿ ಮಾಡಿದ್ದಾರೆ. ಇವರನ್ನೆಲ್ಲ ಕಾಂಗ್ರೆಸ್ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ದೂರಿದರು. 
 
ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಇದನ್ನೆಲ್ಲ ಮಾಡುತ್ತಿದೆ. ಈ ಹಿಂದೆ  ಬಾಂಗ್ಲಾದೇಶಿಯರನ್ನು ಹಿಡಿದು ಕೊಟ್ಟ ನಾಗೇಂದ್ರ ಎಂಬುವರ ಮೇಲೆ ಎರಡು ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಿದ್ದಾರೆ. ಆದರೆ ಈಗ ಬಾಂಗ್ಲಾದೇಶಿಯರ ಪರವೇ ನಿಲ್ಲುವುದು ಎಷ್ಟು ಸರಿ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದೆಲ್ಲ ತಿಳಿಯುವುದಿಲ್ಲವೇ ಎಂದು ಪ್ರಶ್ನಿಸಿದರು. ಆದ್ದರಿಂದ ಈ ಪ್ರಕರಣ ನೈತಿಕ ಹೊಣೆ ಹೊತ್ತು ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಮುಲ್ಲಾ ಕುರಿತು ಸಿ.ಟಿ.ರವಿ ಅವರು ಮಾತನಾಡಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಲು ಮುಂದಾಗುವ ಸರ್ಕಾರ ಸರಕಾರಿ ಅಧಿಕಾರಿಯನ್ನು ಹಾಡಹಗಲೇ ಅಟ್ಟಾಡಿಸಿ ಹಲ್ಲೆ ಮಾಡುವವರನ್ನು ಏಕೆ ರಕ್ಷಿಸುತ್ತಿದೆ ಎಂದು ಕೇಳಿದರು. 
 
ರಾಹುಲ್ ಗಾಂಧಿ ಅವರು, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಾವಾಗಲೂ ಕೈನಲ್ಲಿ ಹಿಡಿದುಕೊಂಡು ಓಡಾಡುತ್ತಾರೆ. ಆದರೆ ಅವರದೇ ಪಕ್ಷದ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳಿಗೆ ರಕ್ಷಣೆ ಮಾಡುತ್ತಿದ್ದಾರೆ. ತೋರಿಕೆಗೆ ಮೂವರನ್ನು ಬಂಧಿಸಿದ್ದಾರೆ. ಈ ಹಿಂದೆ ಶಿವಾಜಿನಗರದ ಪಾದಚಾರಿ ಮಾರ್ಗ ಒತ್ತುವರಿ ತೆರವು ವೇಳೆಯೂ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಆಗಿದೆ. ಆಗಲೂ ಸರ್ಕಾರ ಕೈಕಟ್ಟಿ ಕೂತಿತ್ತು. ಅಧಿಕಾರಿಗಳನ್ನೇ ರಕ್ಷಿಸದ ಗೃಹ ಸಚಿವರು ಇನ್ನು ಸಾಮಾನ್ಯ ಜನರಿಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ. ನಿಮ್ಮ ತಾಖತ್ ಏನಿದ್ದರೂ ಆರ್‍ಎಸ್‍ಎಸ್ ವಿರುದ್ಧ ಮಾತನಾಡುವುದರಲ್ಲೇ ಮುಗಿದಿದೆ ಎಂದು ಟೀಕಿಸಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ