Publish Date: Tue, 03 Feb 2026 (21:41 IST)
Updated Date: Tue, 03 Feb 2026 (21:49 IST)
ಬೆಂಗಳೂರು: ರಾಜ್ಯ ವಿಧಾನಸಭೆ ವಿಶೇಷ ಅಧಿವೇಶನ ನಡೆಯುತ್ತಿದ್ದು ಇಂದು ರಾತ್ರಿ ಬಿಜೆಪಿ ಶಾಸಕರು ವಿಧಾನಸೌಧದಲ್ಲೇ ಮೊಕ್ಕಾಂ ಹೂಡಲಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು ಹಿಡಿದಿದೆ. ಈ ಸಂಬಂಧ ಇಂದು ಬಿಜೆಪಿ ಶಾಸಕರು ಸದನದಲ್ಲೇ ಇದ್ದು ಅಹೋರಾತ್ರಿ ಧರಣಿ ನಡೆಸಲಿದ್ದಾರೆ.
ಬಿಜೆಪಿ ಶಾಸಕರಿಗೆ ಜೆಡಿಎಸ್ ಶಾಸಕರೂ ಸಾಥ್ ನೀಡಿದ್ದಾರೆ. ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಬಿವೈ ವಿಜಯೇಂದ್ರ, ಅಬಕಾರಿ ಸಚಿವರ ಮೇಲೆ ನೇರ ಆರೋಪ ಬಂದಿದೆ. ಭ್ರಷ್ಟಾಚಾರದ ಆರೋಪ ಬಂದ ಸಂದರ್ಭದಲ್ಲಿ ಸ್ವತಃ ಮುಖ್ಯಮಂತ್ರಿಗಳೇ ಅವರ ಬೆನ್ನಿಗೆ ನಿಂತಿದ್ದನ್ನು ನೋಡಿದರೆ ಅಬಕಾರಿ ಇಲಾಖೆಯ ಐದಾರು ಸಾವಿರ ಕೋಟಿ ಭ್ರಷ್ಟಾಚಾರದ ಹಗರಣದಲ್ಲಿ ಇಲ್ಲಿಗೆ ಪಾಲು ಹೋಗಿದ್ದಲ್ಲದೇ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಪಾಲು ಹೋಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರ ಸರಕಾರ ಇಂಥ ಭಂಡತನ ಮಾಡುತ್ತಿದೆ. ಭ್ರಷ್ಟ ಅಬಕಾರಿ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಮತ್ತೊಮ್ಮೆ ಆಗ್ರಹಿಸುವುದಾಗಿ ತಿಳಿಸಿದರು. ಅಬಕಾರಿ ಸಚಿವರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ಬಿಜೆಪಿ- ಜೆಡಿಎಸ್ ಇವತ್ತು ಅಹೋರಾತ್ರಿ ಧರಣಿ ನಡೆಸಲಿವೆ ಎಂದು ಅವರು ಪ್ರಕಟಿಸಿದರು ಎಂದಿದ್ದಾರೆ.