Publish Date: Tue, 17 May 2022 (14:51 IST)
Updated Date: Tue, 17 May 2022 (14:53 IST)
ಶಾಲಾ ಪಠ್ಯದಲ್ಲಿ ಟಿಪ್ಪು ಸುಲ್ತಾನ್ ವಿಷಯ ಕಡಿತ ಮಾಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿಗರು ಮತ್ತು ಬ್ರಿಟಿಷರು ಇಬ್ಬರೂ ಒಂದೇ ಎಂದಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ಪಠ್ಯಪುಸ್ತಕಗಳನ್ನು ʼಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನು ಟಾರ್ಗೆಟ್ ಮಾಡಿ ಡಿಲೀಟ್ ಮಾಡುವುದು ಎಂದಿದ್ದಾರೆ.
ಬಿಜೆಪಿಯ ಈ ಬುಡಮೇಲು ಕೃತ್ಯಗಳ ಬಗ್ಗೆ ನನಗೆ ಅಚ್ಚರಿಯೇನೂ ಇಲ್ಲ. ನನ್ನ ಜತೆ ಮೈತ್ರಿ ಸರಕಾರ ಮಾಡಿದಾಗ ಅವರ ಬೇಳೆ ಬೇಯಲಿಲ್ಲ. ʼಆಪರೇಷನ್ ಕಮಲʼದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ʼಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರುʼ ಇನ್ನೇನು ಮಾಡಲು ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಮಹಾನ್ ರಾಷ್ಟ್ರಪ್ರೇಮಿ, ಬ್ರಿಟೀಷರಿಗೆ ಸಿಂಹಸ್ವಪ್ನ, ಭಾರತಮಾತೆಯ ಹೆಮ್ಮೆಯ ಪುತ್ರ ಸರ್ದಾರ್ ಭಗತ್ ಸಿಂಗ್ ಅವರ ಪಠ್ಯಕ್ಕೆ ಕೊಕ್ ಕೊಟ್ಟು, ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಕುರಿತ ಮಾಹಿತಿಯನ್ನು ಪಠ್ಯಕ್ಕೆ ತುರುಕುತ್ತಿರುವ ಬಿಜೆಪಿ ಮತ್ತವರ ಪಟಾಲಂ ವಿಕೃತಿಗೆ ಇದು ಪರಾಕಾಷ್ಠೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಡಿ ಗಲ್ಲಿಗೇರಿದರು. ಸಂಘ ಪರಿವಾರಿಗಳು ಅದೇ ಬ್ರಿಟೀಷರಿಗೆ ಪರಿಚಾರಿಕೆ ಮಾಡಿಕೊಂಡು ಸ್ವಾತಂತ್ರ್ಯಕ್ಕಿಂತ ಗುಲಾಮಗಿರಿಯೇ ಲೇಸೆಂದುಕೊಂಡಿದ್ದರು. ಇಂಥವರು, ಭಗತ್ ಸಿಂಗ್ʼರಂಥ ರಾಷ್ಟ್ರಪ್ರೇಮಿಗಳನ್ನು ಸಹಿಸಿಕೊಳ್ಳುತ್ತಾರೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.