Webdunia - Bharat's app for daily news and videos

Install App

ಬಿಜೆಪಿ, ಮೋದಿಯ ಚಿಯರ್ ಲೀಡರ್‌ನಂತೆ ವರ್ತಿಸುವ ಕೆಲಸ ಸಾಕು: ದೇವೇಗೌಡರ ಕಾಲೆಳೆದ ಸಿದ್ದರಾಮಯ್ಯ

Sampriya
ಭಾನುವಾರ, 16 ಫೆಬ್ರವರಿ 2025 (13:17 IST)
Photo Courtesy X
ಬೆಂಗಳೂರು: ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ದೇವೇಗೌಡರ ಹೋರಾಟ ಮನೋಭಾವವನ್ನು ಹೊಗಳುವ ಜೊತೆಗೆ ಸಿದ್ದರಾಮಯ್ಯ ಕಾಲೆಳೆದಿದ್ದಾರೆ.

ನೀರಾವರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ಹೋರಾಡಲು ಸಿದ್ಧ ಎಂಬ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆಯನ್ನು ನಾನು ಸಂಪೂರ್ಣ ಸ್ವಾಗತಿಸುತ್ತೇನೆ ಎಂದಿರುವ ಸಿದ್ದರಾಮಯ್ಯ, ನೆಲ-ಜಲ-ಭಾಷೆ ವಿಚಾರದಲ್ಲಿ ನಾನು ಸದಾ ಕನ್ನಡಿಗನಾಗಿ ನಡೆದುಕೊಂಡಿದ್ದೇನೆಯೇ ಹೊರತು ರಾಜಕಾರಣಿಯಾಗಿ ಅಲ್ಲ ಎನ್ನುವುದನ್ನು ಹಿರಿಯರಾದ ದೇವೇಗೌಡರ ಗಮನಕ್ಕೆ ತರಬಯಸುತ್ತೇನೆ ಎಂದು ಹೇಳಿದ್ದಾರೆ.

ಹತ್ತು ದಿನಗಳ ಅವಧಿಯಲ್ಲಿ 15,000 ಕ್ಯುಸೆಕ್ಸ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕೆಂದು 2016ರ ಸೆಪ್ಟೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದಾಗ ಉದ್ಭವವಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ನಾನು ನಿಮ್ಮ ಮನೆಗೆ ಬಂದು ಕೈಹಿಡಿದು ಕರೆದುಕೊಂಡು ಬಂದು ಸರ್ವಪಕ್ಷಗಳ ಸಭೆ ನಡೆಸಿದ್ದು ನಿಮಗೆ ನೆನಪಿರಬಹುದೆಂದು ಭಾವಿಸಿದ್ದೇನೆ ಎಂದಿದ್ದಾರೆ.

ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ ಇದಕ್ಕಿಂತಲೂ ಮುಖ್ಯವಾಗಿ ಒಬ್ಬ ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ನೀವು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ, ಇತ್ತೀಚೆಗೆ ನೀವು ಮತ್ತು ನಿಮ್ಮ ಪಕ್ಷ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ನನ್ನನ್ನೂ ಸೇರಿದಂತೆ ಏಳುಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ ಎನ್ನುವ ಮೂಲಕ ಕಾಲೆಳೆದಿದ್ದಾರೆ.

ನೀರಾವರಿ ವಿಚಾರದಲ್ಲಿ ನ್ಯಾಯಪಕ್ಷಪಾತಿಯಾಗಿ ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ಮಾಡಬೇಕಾಗಿದ್ದ ಕೇಂದ್ರದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಸತತವಾಗಿ ಕನ್ನಡಿಗರ ಹಿತವನ್ನು ಬಲಿಗೊಡಲು ಹೊರಟಿರುವುದನ್ನು ಸನ್ಮಾನ್ಯ ದೇವೇಗೌಡರಿಗೆ ನಾನು ಬಿಡಿಸಿ ಹೇಳಬೇಕಾಗಿಲ್ಲ ಎಂದು ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ  ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆಯ ವಿವರಗಳೆಲ್ಲ ನಿಮಗೆ ಬಾಯಿಪಾಠದಲ್ಲಿರಬಹುದು. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ ಎಂದು ನೆನಪಿಸಿದ್ದಾರೆ.

ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಸರಮಾಲೆಯನ್ನು ಸದ್ಯ ನೀರಾವರಿ ಕ್ಷೇತ್ರಕ್ಕಷ್ಟೇ ಸೀಮಿತಗೊಳಿಸುತ್ತಿದ್ದೇನೆ. ಇನ್ನು ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ಕೂಡಾ ನಿಮಗೆ ಗೊತ್ತಿರುವುದರಿಂದ ಸಂಸತ್ ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು.

ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ನೀವು ಮುಲಾಜಿಗೆ ಬೀಳದೆ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದವರು. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಆದರೆ ಈಗಿನ ದೇವೇಗೌಡರು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments