ಬೆಂಗಳೂರು: ಕರ್ನಾಟಕದ ರಾಜ್ಯದಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರಿನ ಹಲವೆಡೆ ಬೆಳಗಿನ ಜಾವದಲ್ಲಿ ದಟ್ಟ ಮಂಜು ಕವಿದ ವಾತಾವರಣ ಇರಲಿದೆ.
ಡಿ.7ರಿಂದ 12ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇಂದೂ ಮಂಜು ಮುಸುಕಿದ ವಾತಾವರಣ ಇರಲಿದ್ದು, ಇನ್ನೆರಡು ದಿನ ವಿಪರೀತ ಚಳಿ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್‌ನಲ್ಲಿ ಶನಿವಾರ ಬೆಳಗ್ಗೆ ಅತಿ ಕನಿಷ್ಠ ತಾಪಮಾನ 13.5 ಸೆಲ್ಸಿಯಸ್ ದಾಖಲಾಗಿದೆ. ಇನ್ನು ದಕ್ಷಿಣ ಕೇರಳ ಕರಾವಳಿ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂತ 0.9 ಕಿ.ಮೀ. ಎತ್ತರದಲ್ಲಿ ವಾಯು ಚಂಡಮಾರುತದ ಪರಿಚಲನೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸದ್ಯ ಒಣ ಹವೆಯಿರಲಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.