ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕುಗೊಂಡಿದೆ. ಹೀಗಾಗಿ, ಸೋಮವಾರತನಕ ಬೆಂಗಳೂರು, ಕೋಲಾರ ಸೇರಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ಮಂಜು ಬೀಳುವ ಸಾಧ್ಯತೆ ಹೆಚ್ಚು.
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಚಳಿ ಮತ್ತು ಮಳೆಯ ಆಟ ಆರಂಭವಾಗಿದೆ. ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ಚಳಿ ಹಾಗೂ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವೆಡೆ ತೀವ್ರ ಚಳಿ ಇರಲಿದೆ ಎಂದು ಇಲಾಖೆ ತಿಳಿಸಿದೆ.
ಸೋಮವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆಯಿದೆ.