ಬೆಂಗಳೂರು: ಬೆಳಗಾವಿಯಲ್ಲಿ ರಾಜ್ಯ ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಡಿಸೆಂಬರ್ 9ರಂದು ಸುವರ್ಣ ವಿಧಾನಸೌಧಕ್ಕೆ ಬಿಜೆಪಿ ಹೆಚ್ಚಿನ ಸಂಖ್ಯೆಯ ರೈತರೊಂದಿಗೆ ಮುತ್ತಿಗೆ ಹಾಕಲಿದೆ.
ವಿವಿಧ ಸಮಸ್ಯೆಗಳು ಮತ್ತು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಉದ್ದೇಶದಿಂದ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಶನಿವಾರ ಹೇಳಿದರು. ವಿಧಾನಮಂಡಲದ ಚಳಿಗಾಲದ ಅಧಿವೇಶನ ಡಿಸೆಂಬರ್ 8 ರಿಂದ 19 ರವರೆಗೆ ಬೆಳಗಾವಿಯಲ್ಲಿ ನಡೆಯಲಿದೆ.
ಅಧಿವೇಶನದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಚರ್ಚಿಸಿಲ್ಲ ಎಂದು ವಿಜಯೇಂದ್ರ ಹೇಳಿದರು.
ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕೇವಲ ನೆಪ ಮಾತ್ರಕ್ಕೆ ಒಂದು ದಿನ ನಡೆಯುತ್ತವೆ. ಆದರೆ ಈ ಬಾರಿ ಅದನ್ನು ಗಂಭೀರವಾಗಿ ಪರಿಗಣಿಸಿ, ಅಧಿವೇಶನದ ಆರಂಭಿಕ ದಿನಗಳಲ್ಲಿಯೇ ಈ ಪ್ರದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಲು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದರು.
ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಯದೆ ಉಳಿದಿದೆ. ಮೆಕ್ಕೆಜೋಳ ಖರೀದಿಯನ್ನು ಸರಿಯಾಗಿ ನಿರ್ವಹಿಸಲಾಗಿಲ್ಲ ಮತ್ತು ಒಟ್ಟು 54 ಲಕ್ಷ ಮೆಟ್ರಿಕ್ ಟನ್‌ಗಳಲ್ಲಿ ಕೇವಲ 5 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಮಾತ್ರ ರಾಜ್ಯ ಸರ್ಕಾರ ಖರೀದಿಸಿದೆ ಎಂದು ಅವರು ಆರೋಪಿಸಿದರು.