ಬೆಂಗಳೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರ ಭೀತಿ ಕಾಣಿಸಿಕೊಂಡಿದ್ದು, ಚಿಕನ್ ಪ್ರಿಯರಿಗೆ ಪಶುಸಂಗೋಪನಾ ಇಲಾಖೆ ಕೆಲವು ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಇಲ್ಲಿದೆ ವಿವರ.
ಬಳ್ಳಾರಿ, ರಾಯಚೂರು, ಚಿಕ್ಕಬಳ್ಳಾಪುರ ಮುಂತಾದ ಗಡಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು ಸಾಕಷ್ಟು ಕೋಳಿಗಳ ಮಾರಣ ಹೋಮ ನಡೆಸಲಾಗಿದೆ. ಹಕ್ಕಿ ಜ್ವರ ಹಿನ್ನಲೆಯಲ್ಲಿ ಜನ ಚಿಕನ್ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.
ಹೀಗಾಗಿ ಈಗ ಸುರಕ್ಷಿತವಾಗಿ ಚಿಕನ್ ಸೇವನೆ ಮಾಡಲು ಏನು ಮಾಡಬೇಕು ಎಂಬ ಬಗ್ಗೆ ಪಶುಸಂಗೋಪನಾ ಇಲಾಖೆ ಕೆಲವು ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಅವುಗಳ ವಿವರ ಇಲ್ಲಿದೆ ನೋಡಿ.
-ಕೋಳಿ ಮಾಂಸ ಅಡುಗೆಗೆ ಬಳಸುವ ಮುನ್ನ ಕೆಲವು ಮುಂಜಾಗ್ರತಾ ಕ್ರಮ ವಹಿಸಬೇಕು.
-ಅಡುಗೆಗಾಗಿ ಕೋಳಿಮಾಂಸವನ್ನು ತಯಾರಿಸಿದ ಬಳಿಕ ಕೈಗಳನ್ನು ಸ್ಯಾನಿಟೈಸರ್ ನಿಂದ ತೊಳೆದುಕೊಳ್ಳಬೇಕು
-70 ಡಿಗ್ರಿ ಸೆಂಟಿ ಗ್ರೇಡ್ ಗಿಂತ ಅಧಿಕ ಉಷ್ಣಾಂಶದಲ್ಲಿ ಕೋಳಿ ಮಾಂಸವನ್ನು ಸುಮಾರು 30 ನಿಮಿಷ ಬೇಯಿಸಿ ತಿನ್ನಬಹುದು.
-ಅಧಿಕ ಉಷ್ಣಾಂಶದಲ್ಲಿ ಬೇಯಿಸಿದಾಗಿ ವೈರಾಣುಗಳು ಉಳಿಯುವುದಿಲ್ಲ.
-ಹಸಿ ಕೋಳಿಮಾಂಸ ಅಥವಾ ಮೊಟ್ಟೆಯನ್ನು ಬೇಯಿಸದೇ ಉಪಯೋಗಿಸುವ ಆಹಾರ ಪದಾರ್ಥಕ್ಕೆ ಸೋಕದಂತೆ ಎಚ್ಚರಿಕೆ ವಹಿಸಬೇಕು.
-ಬೇಯಿಸದ ಮೊಟ್ಟೆ, ಕೋಳಿ ಮಾಂಸವನ್ನು ಸೇವಿಸಬಾರದು.
-ಅನಗತ್ಯವಾಗಿ ಕೋಳಿ ಫಾರಂಗಳಿಗೆ ಭೇಟಿ ನೀಡಬೇಡಿ
-ಕೋಳಿ ಫಾರಂನಲ್ಲಿ ಕೆಲಸ ಮಾಡುವವರು ಆಗಾಗ ನಂಜುನಾಶಕ ದ್ರಾವಣದಿಂದ ತೊಳೆಯುತ್ತಿರಬೇಕು.
-ಕೋಳಿ ಪಂಜರಗಳನ್ನು ಪ್ರತಿನಿತ್ಯ ಶುಚಿಗೊಳಿಸಿ, ನೀರು, ಆಹಾರ ಬದಲಾಯಿಸುತ್ತಿರಬೇಕು.
-ಕೋಳಿ ಫಾರಂನಲ್ಲಿ ಬೇರೆ ಹಕ್ಕಿಗಳು ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಬೇಕು.