ಬೆಂಗಳೂರು: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಮಾರ್ಚ್ 7 ರಂದು ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಆದರೆ ಈ ಬಾರಿ ಸಿದ್ದರಾಮಯ್ಯ ನಿಂತು ಬಜೆಟ್ ಓದುವುದು ಅನುಮಾನವಾಗಿದೆ.
ಸಿಎಂ ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಈ ಕಾರಣಕ್ಕೆ ಅವರು ಎಲ್ಲೇ ಹೋಗುವುದಿದ್ದರೂ ವೀಲ್ ಚೇರ್ ನಲ್ಲಿ ಓಡಾಡುತ್ತಿದ್ದಾರೆ. ಯಾವುದೇ ಸಭೆ, ಸಮಾರಂಭಗಳನ್ನೂ ವೀಲ್ ಚೇರ್ ನಲ್ಲಿ ಕುಳಿತೇ ಅಟೆಂಡ್ ಮಾಡುತ್ತಿದ್ದಾರೆ.
ಸದ್ಯಕ್ಕೆ ಅವರಿಗೆ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದು ಈ ಕಾರಣಕ್ಕೆ ಸಿಎಂ ಸಿದ್ದು ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಈ ಬಾರಿ ಅವರು ಕುಳಿತುಕೊಂಡೇ ಬಜೆಟ್ ಮಂಡನೆ ಮಾಡಲಿದ್ದಾರೆ ಎನ್ನುತ್ತಿವೆ ಮೂಲಗಳು.
ಬಜೆಟ್ ಭಾಷಣವೆಂದರೆ ಕನಿಷ್ಠ 1 ರಿಂದ 2 ಗಂಟೆಯಾದರೂ ನಿಲ್ಲಬೇಕಾಗುತ್ತದೆ. ಸದ್ಯದ ಮಟ್ಟಿಗೆ ಅವರಿಗೆ ಅಷ್ಟು ಹೊತ್ತು ನಿಲ್ಲಲು ಸಾಧ್ಯವಿಲ್ಲ. ಈ ಕಾರಣಕ್ಕೆ ಕುಳಿತು ಬಜೆಟ್ ಮಂಡಿಸಲಿದ್ದಾರೆ. ಒಟ್ಟಿನಲ್ಲಿ ಕುಳಿತಾದರೂ ಓದಿ, ನಿಂತಾದರೂ ಓದಿ ನಮಗೆ ಒಳ್ಳೆಯ ಬಜೆಟ್ ನೀಡಿ ಎನ್ನುವುದು ಜನಸಾಮಾನ್ಯರ ಬೇಡಿಕೆಯಾಗಿದೆ.