Publish Date: Mon, 23 Jan 2023 (20:05 IST)
Updated Date: Mon, 23 Jan 2023 (20:12 IST)
ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಕರ್ತವ್ಯನಿರತ ಬೆಸ್ಕಾಂ ಲೈನ್ ಮನ್ ಮೃತಪಟ್ಟಿರುವ ಘಟನೆ ಮಾಗಡಿ ರಸ್ತೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ದುರ್ಘಟನೆಯಲ್ಲಿ ಬೆಸ್ಕಾಂ ಲೈನ್ ಮನ್ ಗೌತಮ್ (26) ಮೃತಪಟ್ಟಿದ್ದು, ಸೋಮವಾರ ಬೆಳಗ್ಗೆ ಸುಮಾರು 9.10ಕ್ಕೆ ವಿದ್ಯುತ್ ವ್ಯತ್ಯಯ ದೂರ ಬಂದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆಯ ಗೋಪಾಲಪುರದ ಪೋಲಿಸ್ ಚೌಕಿ ಬಳಿ ಇರುವ ಎಪ್ -29 ಫೀಡರ್ ದುರಸ್ತಿಗೆ ಹೋಗಿದ್ದಾಗ ಘಟನೆ ಸಂಭವಿಸಿದೆ.
ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೇವಲ ಒಂದು ಲೈನ್ ನ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಇನ್ನೊಂದು ಲೈನ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರಲಿಲ್ಲ. ಅರ್ಥಿಂಗ್ ಮಾಡಿಕೊಳ್ಳದೆ ಕಾರ್ಯನಿರ್ವಹಿಸಿದ್ದರಿಂದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಪ್ರವಹಿಸಿ ಗೌತಮ ಮೃತಪಟ್ಟಿದ್ದಾರೆಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗೌತಮ ಅವರನ್ನು ಸ್ಥಳೀಯರು ತಕ್ಷಣವೇ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಸಾಗಿಸುವ ವೇಳೆ ಮೃತ ಪಟ್ಟಿರುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ರಾತ್ರಿ ಪಾಳಿಯಲ್ಲಿದ್ದ ಗೌತಮ ಅವರು ವಿದ್ಯುತ್ ವ್ಯತ್ಯಯ ದೂರ ಬಂದ ತಕ್ಷಣ ಕರ್ತವ್ಯಕ್ಕೆ ತೆರಳಿದ್ದಾರೆ. ಸ್ಥಳಕ್ಕೆ ಬೆಸ್ಕಾಂನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಗಡಿ ರಸ್ತೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.