ಬೆಂಗಳೂರು: ಸ್ಲೀಪರ್ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೊಬೈಲ್ ಕಸಿದು ಕಿಸ್ ಕೊಡು ಎಂದು ಕಿರುಕುಳ ನೀಡಿದ ಬಸ್ ಡ್ರೈವರ್ ಆರಿಫ್ ಎಂಬಾತನನ್ನು ಪೋಷಕರು ರಸ್ತೆಯಲ್ಲೇ ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹೈದರಾಬಾದ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್ ನಲ್ಲಿ ಘಟನೆ ನಡೆದಿದೆ. ಅರ್ಧದಾರಿಯಲ್ಲಿ ಮೊಬೈಲ್ ಬ್ಯಾಟರಿ ಖಾಲಿಯಾಗಿತ್ತು ಎಂದು ಯುವತಿ ಡ್ರೈವರ್ ಗೆ ಮೊಬೈಲ್ ಚಾರ್ಜ್ ಗೆ ಹಾಕಲು ನೀಡಿದ್ದಳು. ಚಾರ್ಜ್ ಆದ ಬಳಿಕ ಮೊಬೈಲ್ ಪಡೆಯಲು ಹೋದಾಗ ಕಿಸ್ ಕೊಡು ಎಂದು ಆಟವಾಡಿಸಿದ್ದ. ಆಕೆ ಪ್ರತಿರೋಧಿಸಿದಾಗ ತಣ್ಣಗಾದ ಡ್ರೈವರ್ ಮೊಬೈಲ್ ನೀಡಿದ್ದ. ಇದನ್ನು ಯುವತಿ ಕರೆ ಮಾಡಿ ತನ್ನ ಪೋಷಕರಿಗೆ ತಿಳಿಸಿದ್ದಳು.
ಸಿಟ್ಟಿಗೆದ್ದು ಚಾಲುಕ್ಯ ಸರ್ಕಲ್ ಬಳಿ ನಿಲ್ದಾಣಕ್ಕೆ ಬಂದು ಕಾಯುತ್ತಿದ್ದ ಪೋಷಕರು ಡ್ರೈವರ್ ಆರಿಫ್ ನನ್ನು ಹಿಡಿದೆಳೆದು ಆತನ ಬಟ್ಟೆ ಬಿಚ್ಚಿ ಹಿಗ್ಗಾ ಮುಗ್ಗಾ ಗೂಸಾ ಕೊಟ್ಟಿದ್ದಾರೆ. ಆತನನ್ನು ಕೇವಲ ಒಳ ಉಡುಪಿನಲ್ಲಿ ನಿಲ್ಲಿಸಿ ನಡು ರಸ್ತೆಯಲ್ಲಿ ಮೈ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ.
ಬಳಿಕ ಟ್ರಾಫಿಕ್ ಪೊಲೀಸರು ಮಧ್ಯಪ್ರವೇಶಿಸಿ ಯುವಕನನ್ನು ಆಟೋದಲ್ಲಿ ಅಲ್ಲಿಂದ ಕರೆದೊಯ್ದು ರಕ್ಷಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಬಹುಶಃ ಆತ ಬೀದಿ ಹೆಣವಾಗುತ್ತಿದ್ದನೇನೋ. ಈ ವಿಡಿಯೋ ಇಲ್ಲಿದೆ ನೋಡಿ.