ಬೆಂಗಳೂರು: ಹೆತ್ತಮ್ಮನ ಒಡವೆಯನ್ನು ಕದ್ದಿದ್ದ ವಿಚಾರವನ್ನು ಬಾಯ್ಬಿಟ್ಟಿದ್ದಕ್ಕೆ ಸ್ನೇಹಿತನನ್ನು ಕೊಂದಿರುವ ಆಘಾತಕಾರಿ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ ನಡೆದಿದೆ.
ಹತ್ಯೆಯಾದ ಸ್ನೇಹಿತನನ್ನು ರಾಹುಲ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಯನ್ನು ಪ್ರೀತಂ ಎಂದು ಗುರುತಿಸಲಾಗಿದೆ. ಒಬ್ಬ ಇಂಜಿನಿಯರಿಂಗ್ ಓದುತ್ತಿದ್ರೆ, ಮತ್ತೊಬ್ಬ ಪಿಯುಸಿ ಡ್ರಾಪ್‌ಔಟ್ ಆಗಿದ್ದ. ಕೋಣನಕುಂಟೆಯ ಕೃಷ್ಷಪ್ಪ ಲೇಔಟ್‌ನಲ್ಲಿ ಪ್ರೀತಂ ಮನೆಯಿದೆ.
ರಾಹುಲ್, ಪ್ರೀತಂ ಮನೆಗೆ ಬಂದು ಊಟ ಮಾಡಿ ಸಮಯವನ್ನು ಕಳೆಯುತ್ತಿದ್ದ. 25 ರಂದು ಮನೆಯಲ್ಲಿ ಪ್ರೀತಂನ ತಾಯಿಯ ಚಿನ್ನದ ಒಡವೆಗಳು ಕಳ್ಳತನವಾಗಿದೆ. ಮನೆಯಲ್ಲಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ.
ಈ ಸಂದರ್ಭದಲ್ಲಿ ಒಬ್ಬರು ಮತ್ತೊಬ್ಬರ ಮೇಲೆ ಆರೋಪ ಮಾಡಿದ್ದಾರೆ. ಪ್ರೀತಂನ ಬ್ಯಾಗ್‌ನಲ್ಲಿ ಒಡವೆಗಳನ್ನು ನೋಡಿದ ರಾಹುಲ್, ಆತನ ತಾಯಿಗೆ ಹೇಳಿದ್ದಾನೆ. ಇದರಿಂದ ಕೋಪಗೊಂಡ ಪ್ರೀತಂ ನಿನ್ನ ಬಳಿ ಮಾತನಾಡಬೇಕು ಎಂದು ರಾಹುಲ್‌ನ ಕರೆಸಿಕೊಂಡು ಜಗಳ ಮಾಡಿ ಚಾಕುವಿನಿಂದ ಇರಿದಿದ್ದಾನೆ.
ಜೊತೆಯಲ್ಲಿ ಬಂದಿದ್ದ ಸ್ನೇಹಿತರು ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡದಿದ್ದಾರೆ.
ತನ್ನ ಮನೆಯಲ್ಲಿ ತಾನೇ ಒಡವೆಗಳನ್ನು ಕಳ್ಳತನ ಮಾಡಿದ್ದ ಪ್ರೀತಂ ಸಿಕ್ಕಿ ಹಾಕಿಕೊಂಡಿದ್ದಲ್ಲದೇ, ಈ ವಿಚಾರವನ್ನು ಅಮ್ಮನ ಬಳಿ ಮತ್ತು ಸ್ನೇಹಿತರ ಬಳಿ ಹೇಳಿ ಮರ್ಯಾದೆ ತೆಗೆದಿದ್ದಾನೆ ಎಂದು ಕೋಪಗೊಂಡು ರಾಹುಲ್‌ನ ಕೊಲೆ ಮಾಡಿದ್ದಾನೆ.