ಬೆಂಗಳೂರು: ಗಣೇಶ ಹಬ್ಬಕ್ಕೆ ಈ ಬಾರಿಯೂ ಬಿಬಿಎಂಪಿ ಕಠಿಣ ನಿಯಮಗಳನ್ನು ರೂಪಿಸಿದೆ. ಗಣೇಶ ತಂದು ಕೂರಿಸುವವರು ಈ ನಿಯಮಗಳನ್ನು ತಪ್ಪದೇ ಗಮನಿಸಿ.
ಗಣೇಶ ಹಬ್ಬಕ್ಕೆ ಕೆಲವೇ ದಿನ ಬಾಕಿಯಿರುವಾಗ ಬಿಬಿಎಂಪಿ ಮಾರ್ಗಸೂಚಿ ಪ್ರಕಟಿಸಿದೆ. ಪಿಒಪಿ ಗಣೇಶನ ಮೂರ್ತಿಯನ್ನು ಮಾರಾಟ ಮಾಡುವುದು ಮನೆಗೆ ತರುವುದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಬಿಬಿಎಂಪಿ ಕಟ್ಟುನಿಟ್ಟಾಗಿ ಹೇಳಿದೆ.
ಬಿಬಿಎಂಪಿ ಉಪವಿಭಾಗಗಳ ನೋಡಲ್ ಅಧಿಕಾರಿಗಳು, ಪೊಲೀಸ್, ಅಗ್ನಿಶಾಮಕ ಮತ್ತು ಬೆಸ್ಕಾಂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಲು ಸೂಚಿಸಲಾಗಿದೆ. ಪರಿಸರ ಸ್ನೇಹಿ ಗಣೇಶನನ್ನೇ ಮಾರಾಟ ಮಾಡಬೇಕು ಮತ್ತು ಖರೀದಿ ಮಾಡಬೇಕು ಎಂದು ಸೂಚಿಸಲಾಗಿದೆ. ನಿಷೇಧಿತ ವಸ್ತು ಬಳಸಿ ತಯಾರಿಸಿದ ಗಣೇಶನ ಮೂರ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತದೆ.
ನೈಸರ್ಗಿಕವಾಗಿ ಜೇಡಿಮಣ್ಣಿನಿಂದ ತಯಾರಿಸಿದ ಗಣೇಶನನ್ನೇ ತಯಾರು ಮಾಡಬೇಕು. ಇನ್ನು, ಗಣೇಶ ಹಬ್ಬದ ನೆಪದಲ್ಲಿ ಜೋರಾಗಿ ಡಿಜೆ ಹಾಕಿಕೊಂಡು ಶಬ್ದ ಮಾಲಿನ್ಯ ಮಾಡುವಂತಿಲ್ಲ. ಗಣೇಶನ ಮೂರ್ತಿ ಕೂರಿಸಲು ಉಪವಿಭಾಗೀಯ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಾಗಿ ನೇಮಕಗೊಂಡ ಕಾರ್ಯನಿರ್ವಾಹಕ ಎಂಜಿನಿಯರ್ ಗಳ ಕಚೇರಿಯಲ್ಲಿ ಅನುಮತಿ ಕಡ್ಡಾಯವಾಗಿ ಪಡೆಯಬೇಕು.