ಬೆಂಗಳೂರು: ಬಿಬಿಎಂಪಿ ಇ ಖಾತಾ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಹಾಕಲು ಮತ್ತು ಕಚೇರಿಗೆ ಅಲೆದಾಡಿ ಬೇಸತ್ತಿದ್ದರೆ ಬಿಬಿಎಂಪಿ ಮತ್ತೊಂದು ಸುಲಭ ದಾರಿ ಮಾಡಿಕೊಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಇ ಖಾತಾ ಪಡೆಯಲು ಪಾಲಿಕೆ ಕಚೇರಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕಚೇರಿಗೆ ಹೋಗಲು ಸಾಧ್ಯವಾಗದಿದ್ದರೆ ವೆಬ್ ಸೈಟ್ ಮೂಲಕವೂ ಅರ್ಜಿ ಹಾಕಬಹುದಿತ್ತು. ಆದರೆ ಕೆಲವು ಕಡೆ ಸೈಬರ್ ಸೆಂಟರ್ ಗಳಲ್ಲಿ ಇದಕ್ಕಾಗಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೊಪ ಕೇಳಿಬಂದಿದೆ.
ಹೀಗಾಗಿ ಈಗ ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಬಿಬಿಎಂಪಿ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ ಖಾತಾಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಬೆಂಗಳೂರಿನಲ್ಲಿ ಸಾಕಷ್ಟು ಬೆಂಗಳೂರು ಒನ್ ಕೇಂದ್ರಗಳಿರುವುದರಿಂದ ಈ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಇದರಿಂದ ಜನರಿಗೆ ಅನುಕೂಲವಾಗಲಿದೆ.
ಬೆಂಗಳೂರು ಒನ್ ಕೇಂದ್ರಗಳಲ್ಲಿ ಇ ಖಾತಾ ಮಾಡಿಸಲು 45 ರೂ. ನಿಗದಿಪಡಿಸಲಾಗಿದೆ. ಇದಕ್ಕಾಗಿ ಬೆಂಗಳೂರು ಒನ್ ಸಿಬ್ಬಂದಿಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಹೀಗಾಗಿ ಈಗ ಆನ್ ಲೈನ್, ಬಿಬಿಎಂಪಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಪರದಾಡುತ್ತಿರುವ ಜನರಿಗೆ ಬಿಬಿಎಂಪಿಯ ಈ ನಿರ್ಧಾರದಿಂದ ಅನುಕೂಲವಾಗಲಿದೆ.