ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿ ಮುಂಬೈನಲ್ಲಿ ಬೆಂಗಳೂರು ತಿಂಡಿ ರುಚಿ ಸವಿದ ವಿಶೇಷ ಕ್ಷಣವೊಂದರ ಫೋಟೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎಲ್ಲರಿಗೂ ಗೊತ್ತಿರುವ ಹಾಗೆ ಅನುಷ್ಕಾ ಶರ್ಮಾ ಮೂಲತಃ ಬೆಂಗಳೂರಿನವರು. ವಿರಾಟ್ ಕೊಹ್ಲಿಗೂ ಐಪಿಎಲ್ ದೆಸೆಯಿಂದ ಬೆಂಗಳೂರು ಎರಡನೇ ತವರಿದ್ದಂತೆ. ಇಲ್ಲಿನ ದೋಸೆ ಎಂದರೆ ನನಗೆ ತುಂಬಾ ಇಷ್ಟ ಎಂದು ಕೊಹ್ಲಿ ಅನೇಕ ಬಾರಿ ಹೇಳಿದ್ದಿದೆ.
ಇದೀಗ ಆಸ್ಟ್ರೇಲಿಯಾ ಸರಣಿಗೆ ತೆರಳುವ ಮುನ್ನ ಮುಂಬೈನಲ್ಲೇ ಇರುವ ಕೊಹ್ಲಿ ದಂಪತಿ ಮುಂಬೈನ ರೆಸ್ಟೋರೆಂಟ್ ಒಂದಕ್ಕೆ ತೆರಳಿ ಬೆಂಗಳೂರು ತಿಂಡಿಯ ರುಚಿ ಸವಿದಿದ್ದಾರೆ. ಬಾಂದ್ರಾದ ಕೆಫೆಯೊಂದಕ್ಕೆ ತೆರಳಿ ಬೆಂಗಳೂರಿನ ಆಹಾರ ಅದರಲ್ಲೂ ವಿಶೇಷವಾಗಿ ದೋಸೆ ಸವಿದಿದ್ದಾರೆ. ಬಳಿಕ ಹೋಟೆಲ್ ಸಿಬ್ಬಂದಿಗೆ ತಮ್ಮ ಸಹಿ ಇರುವ ಕ್ಯಾಪ್ ನ್ನು ವಿರಾಟ್ ಕೊಹ್ಲಿ ನೀಡಿದ್ದಾರೆ.
ರುಚಿಯಾದ ತಿಂಡಿ ಸವಿದಿದ್ದು ಮಾತ್ರವಲ್ಲದೆ, ಅಲ್ಲಿನ ಸಿಬ್ಬಂದಿಗಳೊಂದಿಗೆ ಆತ್ಮೀಯವಾಗಿ ಸೆಲ್ಫೀಗೂ ಪೋಸ್ ಕೊಟ್ಟಿದ್ದಾರೆ. ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಅವರು ಬೆಂಗಳೂರು ದಿನಗಳು ಮತ್ತೆ ನೆನಪಾಯ್ತು ಮಚ್ಚಾ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇದಕ್ಕೆ ಡಾ. ರಾಜ್ ಕುಮಾರ್ ಅವರ ಹಾಡನ್ನೂ ಟ್ಯಾಗ್ ಮಾಡಿದ್ದಾರೆ. ಇದನ್ನು ನೋಡಿ ಬೆಂಗಳೂರಿನ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.