ಬೆಂಗಳೂರು: ಬಿಹಾರ ಚುನಾವಣೆ ಸಂದರ್ಭದಲ್ಲೇ ಯಾಕೆ ಹೀಗೆ ಆಗಿದೆ, ನನಗೆ ಯಾಕೋ ಬಿಜೆಪಿ ಮೇಲೆ ಅನುಮಾನವಿದೆ. ಬಿಹಾರದಲ್ಲಿ ಚುನಾವಣೆ ಗೆಲ್ಲಕ್ಕೇ ಈ ರೀತಿ ಮಾಡಿರಬಹುದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಮತ್ತು ಪ್ರಧಾನಿ ಮೋದಿ ಹೇಳುವಷ್ಟು ಸ್ವಚ್ಛ ಇಲ್ಲ. ಅವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡ್ತಾರೆ, ಏನು ಬೇಕಾದರೂ ಬಳಸ್ತಾರೆ. ಹೀಗಾಗಿ ನನಗೂ ಇದರ ಬಗ್ಗೆ ಅನುಮಾನವಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. ಅವರ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.
ಬಿಹಾರ ಚುನಾವಣೆಗೂ ಮೊದಲೇ ಯಾಕೆ ಹೀಗಾಗ್ತಿದೆ? ಮೊದಲ ಹಂತದ ಚುನಾವಣೆ ಬಳಿಕ ಗೆಲ್ಲಕ್ಕೆ ಕಷ್ಟ ಎನಿಸಿದ ಮೇಲೆ ಎರಡನೇ ಹಂತಕ್ಕೆ ಮೊದಲು ಅವರೇ ಸ್ಪೋಟ ನಡೆಸಿರಬಹುದಾ ನನಗೆ ಗೊತ್ತಿಲ್ಲ. ಸದ್ಯಕ್ಕೆ ನನಗೆ ಯಾವುದೇ ಸಾಕ್ಷ್ಯ ಇಲ್ಲ ಎಂದಿದ್ದಾರೆ.
ಬಾಂಬ್ ಸ್ಪೋಟದ ಬಗ್ಗೆಯೂ ಈ ರೀತಿ ರಾಜಕಾರಣ ಮಾಡುತ್ತಿರುವುದು ಸರಿಯೇ? ದೇಶವೇ ಒಗ್ಗಟ್ಟಾಗಿರಬೇಕಾದ ಸಂದರ್ಭದಲ್ಲೂ ರಾಜಕೀಯ ಮಾಡುತ್ತಾರಲ್ಲಾ ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.