ನವದೆಹಲಿ: ಉಗ್ರ ಸಂಘಟನೆಯ ನಾಯಕಿ ಬಂಧಿತ ಡಾ ಶಾಹೀನ್ ಬಗ್ಗೆ ಆಕೆಯ ತಂದೆ ಮಾಧ್ಯಮಗಳ ಮುಂದೆ ಮಾತನಾಡಿದ್ದು ನನ್ನ ಮಗಳು ಹಾಗೆಲ್ಲಾ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಡಾ ಶಾಹೀನ್ ಹಿನ್ನಲೆಯೇ ನಿಗೂಢವಾಗಿದೆ. ಜೈಶ್ ಇ ಮೊಹಮ್ಮದ್ ನ ಸಾದಿಯಾ ಅಜರ್ ಜೊತೆ ಈ ವೈದ್ಯೆಗೆ ನಂಟಿತ್ತು ಎನ್ನಲಾಗಿದೆ. ಭಾರತದಲ್ಲಿ ಜೈಶ್ ಸಂಘಟನೆಯ ಮಹಿಳಾ ವಿಭಾಗ ಸ್ಥಾಪನೆಗೆ ತಯಾರಿ ನಡೆದಿದ್ದು ಈಕೆಯದ್ದೇ ನೇತೃತ್ವಕ್ಕೆ ಸಂಚು ರೂಪಿಸಲಾಗಿತ್ತು.
ಮದುವೆಯಾಗಿದ್ದ ಡಾ ಶಾಹೀನ್ ಪತಿಗೆ ತಲಾಖ್ ನೀಡಿದ್ದಳು. ಮೂಲತಃ ಲಕ್ನೋದ ಲಾಲ್ ಭಾಗ್ ನಿವಾಸಿಯಾಗಿದ್ದ ಶಾಹೀನ್ ಅಲ್ ಫಲಾಹ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದಳು.
ಈಕೆಯ ಬಂಧನದ ಸುದ್ದಿ ತಿಳಿಯುತ್ತಿದ್ದಂತೇ ತಂದೆ ಸೈಯದ್ ಅಹ್ಮದ್ ಅನ್ಸಾರಿ ಪ್ರತಿಕ್ರಿಯಿಸಿದ್ದು, ನನ್ನ ದೊಡ್ಡ ಮಗ ಶೊಯೇಬ್ ನನ್ನ ಜೊತೆಗೆ ವಾಸವಿದ್ದಾನೆ. ಎರಡನೇಎ ಮಗಳು ಶಾಹೀನ್ ಸೈಯದ್ ರನ್ನು ಬಂಧಿಸಲಾಗಿದೆ. ಆಕೆ ಅಲಹಾಬಾದ್ ನಲ್ಲಿ ವೈದ್ಯಕೀಯ ಕೋರ್ಸ್ ಮಾಡಿದ್ದಳು. ನನ್ನ ಮಗಳು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾಳೆ ಎಂದರೆ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಒಂದು ತಿಂಗಳ ಹಿಂದೆ ಶಾಹೀನ್ ಜೊತೆ ಮಾತನಾಡಿದ್ದೆ. ನನಗೆ ಶಾಹೀನ್ ಬಂಧನದ ಬಗ್ಗೆ ಯಾವುದೇ ಮಾಹಿತಿಯಿರಲಿಲ್ಲ. ನನ್ನ ಜೊತೆ ಮಾತನಾಡುವಾಗ ಕುಶಲೋಪರಿ ಬಿಟ್ಟು ಬೇರೆ ಯಾವ ವಿಚಾರವೂ ಮಾತನಾಡುತ್ತಿರಲಿಲ್ಲ ಎಂದಿದ್ದಾರೆ.