Select Your Language

Notifications

webdunia
webdunia
webdunia
webdunia

ಮತ್ತೆ ಶುರುವಾಯ್ತು ಬೆಂಗಳೂರಿನ ನೀರಿನ ಹಾಹಾಕಾರ: ಟ್ಯಾಂಕರ್ ಬೆಲೆ ಎಷ್ಟು ಇಲ್ಲಿದೆ ಡೀಟೈಲ್ಸ್

Water tank

Krishnaveni K

ಬೆಂಗಳೂರು , ಶುಕ್ರವಾರ, 3 ಜನವರಿ 2025 (10:18 IST)
ಬೆಂಗಳೂರು: ಕಳೆದ ವರ್ಷ ಡಿಸೆಂಬರ್ ನಿಂದಲೇ ನೀರಿಲ್ಲದೇ ಬೆಂಗಳೂರಿಗರು ಅಕ್ಷರಶಃ ಪರದಾಡಿದ್ದರು. ಈ ವರ್ಷ ಮತ್ತೆ ಇದೀಗ ನಿಧಾನವಾಗಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ.

ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ನೀರಿನ ಕೊರತೆಯಾಗದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಳೆದ ಒಂದು ತಿಂಗಳಿನಿಂದ ಜೋರಾಗಿ ಮಳೆ ಬಂದಿಲ್ಲ. ಹೀಗಾಗಿ ಕೆಲವೆಡೆ ಬಾವಿಗಳು ಬತ್ತಿ ಹೋಗಿದ್ದು ನೀರಿನ ಬವಣೆ ಮತ್ತೆ ಶುರುವಾಗಿದೆ.

ಕಳೆದ ವರ್ಷ ಡಿಸೆಂಬರ್ ನಿಂದಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರಿನ ಕೊರತೆಯಾಗಿತ್ತು. ಕೊನೆಗೆ ಜನ ಟ್ಯಾಂಕರ್ ಗಳ ಮೊರೆ ಹೋಗಿದ್ದರು. ಕೊನೆಗೆ ಬೇಡಿಕೆ ಹೆಚ್ಚಾಗಿದ್ದರಿಂದ ಟ್ಯಾಂಕರ್ ನೀರು ಸಿಗುವುದೂ ಕಷ್ಟವಾಗಿತ್ತು. ಎಷ್ಟರಮಟ್ಟಿಗೆ ಎಂದರೆ ಕೆಲವು ಕಡೆ ಅಪಾರ್ಟ್ ಮೆಂಟ್ ಗಳಲ್ಲಿ ನೀರಿಲ್ಲದೇ ಶೌಚಾಲಯಕ್ಕೆ ಟಿಶ್ಯೂ ಪೇಪರ್ ಬಳಸುವ ಸ್ಥಿತಿಗೆ ಬಂದು ತಲುಪಿತ್ತು.

ಆದರೆ ಈ ವರ್ಷ ನೀರಿನ ಬವಣೆ ಕೊಂಚ ತಡವಾಗಿದೆ. ಆದರೆ ಜನವರಿಯಿಂದಲೇ ನೀರು ಬತ್ತಿ ಹೋಗಿ ಜನ ಟ್ಯಾಂಕರ್ ಗಳ ಮೊರೆ ಹೋಗುವಂತಾಗಿದೆ. ಕಳೆದ ವರ್ಷ ಬೆಂಗಳೂರಿನ ಕೆಆರ್ ಪುರಂ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬಾಬೂಸಾಪಾಳ್ಯದಲ್ಲಿ ಹಿಂದೆಂದೂ ಕಾಣದ ಬರಗಾಲ ಎದುರಾಗಿತ್ತು. ಈ ಬಾರಿಯೂ ಈ ಪ್ರದೇಶದಲ್ಲಿ ಈಗಿನಿಂದಲೇ ನೀರಿನ ಕೊರತೆ ಕಂಡುಬರುತ್ತಿದೆ.

ಇಲ್ಲಿನ ಹಲವು ಪ್ರದೇಶಗಳಿಗೆ ಕಾವೇರಿ ನೀರಿನ ಸೌಲಭ್ಯ ಬಂದಿಲ್ಲ. ಕಾರ್ಪೋರೇಷನ್ ನೀರು ಸರಿಯಾಗಿ ಬರುತ್ತಿಲ್ಲ. ಟ್ರ್ಯಾಕ್ಟರ್ ಮಾದರಿಯ ಟ್ಯಾಂಕರ್ ಗೆ ಈಗಲೇ 700 ರೂ.ವರೆಗೆ ಬೆಲೆಯಾಗಿದೆ. ಇದಕ್ಕೆ ಮೊದಲು 500 ರೂ.ಗಳಷ್ಟಿತ್ತು. ನೀರಿನ ಕೊರತೆಯಿಂದಾಗಿ ಹೆಚ್ಚಿನ ಮನೆಗಳೂ ಈಗ ಟ್ಯಾಂಕರ್ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ಈಗ ಟ್ಯಾಂಕರ್ ಗಳ ಓಡಾಟ ಹೆಚ್ಚಾಗಿದೆ.

ಕಳೆದ ವರ್ಷ ನೀರಿನ ಕೊರತೆಯಾದಾಗಿನಿಂತ ನಮಗೆ ಕಾರ್ಪೋರೇಷನ್ ನೀರೇ ಸರಿಯಾಗಿ ಬರಲ್ಲ. ಟ್ಯಾಂಕರ್ ಗೆ 700 ರೂ. ನಿಂದ 1,500 ರೂ.ವರೆಗೂ ಕೇಳ್ತಾರೆ. ಹೀಗೇ ಆದ್ರೆ ಏನು ಮಾಡೋದು ಎಂದು ಸ್ಥಳೀಯ ನಿವಾಸಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಬೇಡಿಕೆ ಹೆಚ್ಚಾದಂತೆ ಟ್ಯಾಂಕರ್ ಗಳೂ ಸಕಾಲಕ್ಕೆ ನೀರು ತಂದು ಹಾಕಲ್ಲ. ಸಿಕ್ಕಾಪಟ್ಟೆ ಚಾರ್ಜ್ ಮಾಡ್ತಾರೆ. ಈ ದುಬಾರಿ ಯುಗದಲ್ಲಿ ದಿನನಿತ್ಯದ ಬಳಕೆಯ ನೀರಿಗೂ ದುಡ್ಡು ಕೊಡಬೇಕಾಗಿದೆ ಎಂದರೆ ಬದುಕುವುದು ಹೇಗೆ ಎಂದು ಬಾಡಿಗೆದಾರರ ಅಳಲು. ಕಾವೇರಿ ನೀರು ಬರುವ ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಈ ಸಮಸ್ಯೆಯಿಲ್ಲ. ಉತ್ತರ ಮತ್ತು ಗ್ರಾಮಾಂತರ ಭಾಗಗಳಿಗೆ ಇನ್ನೂ ನೀರು ಒದಗಿಸಲು ಸರಿಯಾದ ವ್ಯವಸ್ಥೆಯಿಲ್ಲ. ಈ ಭಾಗಗಳು ಸಂಕಷ್ಟದಲ್ಲಿದೆ.

ಈ ವರ್ಷ ನಿಗದಿಗಿಂತ ಬೇಗನೇ ಮಳೆಯಾದರೆ ಮಾತ್ರ ಬೆಂಗಳೂರಿಗರಿಗೆ ನೀರಿನ ಸಮಸ್ಯೆಯಾಗದು. ಆದರೆ ಕಳೆದ ವರ್ಷದಂತೆ ಮೇ ತನಕ ಮಳೆಯೇ ಬಾರದೇ ಇದ್ದರೆ ಮತ್ತೊಮ್ಮೆ ಬೆಂಗಳೂರು ಬರಗಾಲಕ್ಕೆ ತುತ್ತಾಗಬೇಕಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ವಿದೇಶದಲ್ಲಿರುವಾಗ ಸಿದ್ದರಾಮಯ್ಯ ಸೀಕ್ರೆಟ್ ಮೀಟಿಂಗ್