ಬೆಂಗಳೂರು: ಬಸ್, ಹಾಲು ಬಳಿಕ ಈಗ ಬೆಂಗಳೂರಿಗರಿಗೆ ನೀರಿನ ದರ ಏರಿಕೆ ಶಾಕ್ ಕಾದಿದೆ. ಒಟ್ಟಾರೆಯಾಗಿ ಹೊಸ ವರ್ಷ ಯಾಕೋ ಸಾರ್ವಜನಿಕರಿಗೆ ಬಲು ದುಬಾರಿಯಾಗುವ ಸಾಧ್ಯತೆಯಿದೆ.
ಬೆಳಿಗ್ಗೆಯಷ್ಟೇ ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಬಸ್ ಟಿಕೆಟ್ ದರ ಏರಿಕೆಯಾಗಲಿದೆ ಎಂದು ಸುದ್ದಿಬಂದಿತ್ತು. ಇದೀಗ ನೀರಿನ ದರ ಏರಿಕೆ ಸುಳಿವು ಸಿಕ್ಕಿದೆ. ಜನವರಿ 2 ನೇ ವಾರದಿಂದ ನೀರಿನ ದರ ಏರಿಕೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಕೆಲವು ದಿನಗಳ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಈ ಬಾರಿ ನೀರಿನ ದರ ಏರಿಕೆ ಮಾಡಿಯೇ ತೀರುತ್ತೇವೆ ಎಂದಿದ್ದರು. ಹಲವು ಸಮಯದಿಂದ ನೀರಿನ ದರ ಏರಿಕೆ ಮಾಡಿಲ್ಲ. ಜಲಮಂಡಳಿ ನಷ್ಟದಲ್ಲಿದ್ದು ದರ ಏರಿಕೆ ಅನಿವಾರ್ಯ ಎಂದಿದ್ದರು.
ಇದೀಗ ಸ್ವತಃ ಜಲಮಂಡಳಿ ಅಧ್ಯಕ್ಷ ರಾಮಪ್ರಸಾದ್ ಮನೋಹರ್ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಜನವರಿ 2 ನೇ ವಾರ ಬೆಂಗಳೂರಿನ ಶಾಸಕರ ಜೊತೆ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆ ಬಳಿಕ ನೀರಿನ ದರ ಏರಿಕೆ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.