ಬೆಂಗಳೂರು: ಏ.18 ಮತ್ತು 19ರಂದು ನಡೆಯಲಿರುವ ಸಿಇಟಿ ಪರೀಕ್ಷೆಗೆ ಆನ್ ಲೈನ್ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮನವಿಯ ಮೇರೆಗೆ ಶುಲ್ಕ ಪಾವತಿಸಲು ಮತ್ತು ಸಿಇಟಿ ಪರೀಕ್ಷೆಯ ಆಯ್ಕೆ ಮಾಡಿಕೊಳ್ಳಲು ಕೆಲವು ಷರತ್ತುಗಳೊಂದಿಗೆ ಅನುಮತಿ ಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಬುಧವಾರ ತಿಳಿಸಿದ್ದಾರೆ.
ಇದರಂತೆ, ಇದುವರೆಗೂ ಶುಲ್ಕ ಪಾವತಿಸದೆ ಇರುವ ಅಭ್ಯರ್ಥಿಗಳು ಏ.10ರ ಬೆಳಿಗ್ಗೆಯಿಂದ ಏ.12ರ ಸಂಜೆ 5 ಗಂಟೆಯವರೆಗೆ ಶುಲ್ಕ ಪಾವತಿಸಬಹುದಾಗಿದೆ.
ಇಂತಹ ಅಭ್ಯರ್ಥಿಗಳು 'ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು' ಇವರ ಹೆಸರಿಗೆ 600 ರೂ. ಮೊತ್ತದ ಡಿ.ಡಿ. ತೆಗೆಸಿಕೊಂಡು, ಸಿಇಟಿ ಅರ್ಜಿ ನಮೂನೆ ಸಹಿತ ಪ್ರಾಧಿಕಾರದ ಕಚೇರಿಗೆ ಖುದ್ದಾಗಿ ಹಾಜರಾಗಬೇಕು ಎಂದು ಅವರು ತಿಳಿಸಿದ್ದಾರೆ.
ಇನ್ನು, ಅರ್ಜಿಯಲ್ಲಿ ಕೆಲವರು ಕೇವಲ ನೀಟ್ ಆಯ್ಕೆ ಮಾಡಿಕೊಂಡಿದ್ದು ಅಂತಹವರು ಈಗ ಸಿಇಟಿ ಪರೀಕ್ಷೆಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂತಹ ಅಭ್ಯರ್ಥಿಗಳು ಕೂಡ ಏ.12ರ ಸಂಜೆ 5 ಗಂಟೆಯೊಳಗೆ ಪ್ರಾಧಿಕಾರಕ್ಕೆ ಹಾಜರಾಗಿ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಆದರೆ, ಹೀಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ರಾಜ್ಯದ ಯಾವುದೇ ಭಾಗದಲ್ಲಿ ಖಾಲಿ ಇರುವ ಪರೀಕ್ಷಾ ಕೇಂದ್ರಗಳಲ್ಲಿ ಅವಕಾಶ ಕೊಡಲಾಗುವುದು. ಅಭ್ಯರ್ಥಿಗಳು ಇದಕ್ಕೆ ಸಿದ್ಧರಿರಬೇಕು ಮತ್ತು ಈ ಹಂತದಲ್ಲಿ ಅರ್ಜಿಯನ್ನು ಪರಿಗಣಿಸುವದರಿಂದ ದತ್ತಾಂಶಗಳಲ್ಲಿ ಆಗಲಿರುವ ವ್ಯತ್ಯಾಸವನ್ನು ಆಕ್ಷೇಪಿಸಲು ಅವಕಾಶ ಇರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.