Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಗೆ ಹಿಂದೂ ಹಬ್ಬಕ್ಕಿಂತ ಇಫ್ತಾರ್ ಕೂಟಗಳ ಮೇಲೆಯೇ ಪ್ರೀತಿ ಹೆಚ್ಚು: ಜೆಡಿಎಸ್ ಆಕ್ರೋಶ

ಕಾಂಗ್ರೆಸ್ ಗೆ ಹಿಂದೂ ಹಬ್ಬಕ್ಕಿಂತ ಇಫ್ತಾರ್ ಕೂಟಗಳ ಮೇಲೆಯೇ ಪ್ರೀತಿ ಹೆಚ್ಚು: ಜೆಡಿಎಸ್ ಆಕ್ರೋಶ

Sampriya

ಬೆಂಗಳೂರು , ಬುಧವಾರ, 10 ಏಪ್ರಿಲ್ 2024 (16:06 IST)
Photo Courtesy X
ಬೆಂಗಳೂರು: ಎಚ್‌ಡಿಕೆ ತಮ್ಮ ತೋಟದ ಮನೆಯಲ್ಲಿ ಆಯೋಜಿಸಿದ್ದ ಬಾಡೂಟ ವ್ಯವಸ್ಥೆಯನ್ನು ಚುನಾವಣಾಧಿಕಾರಿಗಳು ದಾಳಿ ನಡೆಸಿ, ಕುರ್ಚಿ ಹಾಗೂ ಶಾಮಿಯಾನವನ್ನು ತೆಗೆದು ಹಾಕಿದ ವಿಚಾರಕ್ಕೆ ಜೆಡಿಎಸ್ ಪಕ್ಷ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶವ ವ್ಯಕ್ತಪಡಿಸಿದೆ.

ಈ ಘಟನೆ ಬೆನ್ನಲ್ಲೆ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿರುವ ಜೆಡಿಎಸ್‌, ಹಿಂದೂಗಳ ಹಬ್ಬಗಳ ಮೇಲೆಯೇ ಕಾಂಗ್ರೆಸ್​​ಗೆ ಕಾಮಾಲೆ ಕಣ್ಣು ಎಂದು ಕಿಡಿ ಕಾರಿದೆ.

ಪ್ರತೀ ಹಿಂದೂಗಳ ಮನೆಯಲ್ಲಿ ನಡೆಯುವಂತೆ ಕುಮಾರಸ್ವಾಮಿ ಮನೆಯಲ್ಲಿಯೂ ಹೊಸತೊಡಕು ಆಚರಣೆ ನಡೆಯುತ್ತಿದೆ. ಅದರಲ್ಲಿ ವಿಶೇಷವೇನೂ ಇಲ್ಲ. ಹೊಸತೊಡಕು ಊಟಕ್ಕೆ ಸಂಬಂಧಿಕರು, ಸ್ನೇಹಿತರು ಹಾಗೂ ರಾಜಕೀಯ ಸಹಪಾಠಿಗಳನ್ನು ಅವರು ಆಹ್ವಾನಿಸಿದ್ದಾರೆ. ಮಾಂಸದ ಅಡುಗೆ ಈ ದಿನದ ಸಾಮಾನ್ಯ ತಿನಿಸು. ಈ ಊಟಕ್ಕೂ ಕಾಂಗ್ರೆಸ್ ಕಲ್ಲು ಹಾಕಿ ವಿಕೃತಿ ಮೆರೆದಿದೆ ಎಂದು ಜೆಡಿಎಸ್ ಟೀಕಿಸಿದೆ.
‘ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್ ಹಂಚುವ ಕಾಂಗ್ರೆಸ್​’

ಮತಕ್ಕಾಗಿ ಹಣ, ಹೆಂಡ, ಸೀರೆ, ಕುಕ್ಕರ್, ಪ್ರಿಜ್ಡ್, ಕೂಪನ್ ಹಂಚುವ ಸತ್ಸಂಪ್ರದಾಯ ರೂಢಿಸಿಕೊಂಡಿರುವ ಕಾಂಗ್ರೆಸ್, ಕಾವೇರಿ ಅಮ್ಮನ ಹೆಸರಿನಲ್ಲಿ ನಡೆಸಿದ ಮೇಕೆದಾಟು ಪಾದಯಾತ್ರೆಯಲ್ಲಿ ನದಿಯಂತೆ ಹರಿಸಿದ ಮಾಂಸ, ಮದ್ಯದ ಹೊಳೆಯನ್ನು ಕಾಣದವರು ಯಾರೂ ಇಲ್ಲ. ಆದರೆ, ಆ ಪಕ್ಷದ ಕಾಮಾಲೆ ಕಣ್ಣು ಹಿಂದೂಗಳ ಹಬ್ಬಗಳ ಮೇಲೆಯೇ ಬಿದ್ದಿದೆ. ಜಾತಿ, ಧರ್ಮಗಳ ತುಷ್ಟೀಕರಣ ಜಾಡ್ಯ ಕಾಂಗ್ರೆಸ್ ಪಕ್ಷವನ್ನು ಅಂಟಿಕೊಂಡಿದೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಜೆಡಿಎಸ್ ಎಕ್ಸ್ ಸಂದೇಶ

ಯುಗಾದಿ ಹಿಂದೂಗಳ ಹೊಸವರ್ಷ. ಯುಗಾದಿ ಹಿಂದೂಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ಮಿತೆ. ಈ ಹಬ್ಬದ ಮರುದಿನದ ಸಂಭ್ರಮ ಹೊಸತೊಡಕು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. @INCKarnataka ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚರಣೆಯ ಮೇಲೆಯೂ ‘ಕಾಕದೃಷ್ಟಿ’ ಬೀರಿದೆ. ಬಾಡೂಟವನ್ನೂ ಭಯೋತ್ಪಾದನೆಯಂತೆ ವೈಭವೀಕರಿಸುತ್ತಿದೆ.1/4…

    — Janata Dal Secular (@JanataDal_S) April 10, 2024

ಕಾಂಗ್ರೆಸ್ ಸೋಲಿನ ಹತಾಶೆಯಿಂದ ಜೆಡಿಎಸ್ ಹಾಗೂ ಬಿಜೆಪಿಯನ್ನು ಟೀಕಿಸುವ ಬರದಲ್ಲಿ ನಮ್ಮ ಹಿಂದೂ ಸಂಪ್ರದಾಯದ ಬಗ್ಗೆ ಅವಹೇಳನ ಮಾಡಿದೆ. ಅದರ ಕೊಳಕುತನ ಅದರ ಟ್ವೀಟ್​​ನಲ್ಲಿ ಎದ್ದು ಕಾಣುತ್ತಿದೆ. ನಿರಂತರವಾಗಿ ಹಿಂದೂ ವಿರೋಧಿ, ದ್ರೋಹಿ ಆಗಿರುವ ಕಾಂಗ್ರೆಸ್​ಗೆ ಹೊಸತೊಡಕುಗಿಂತ ಇಫ್ತಾರ್ ಕೂಟದಲ್ಲಿಯೇ ಹೆಚ್ಚು ಪ್ರೀತಿ. ಜನ್ಮದಾರಭ್ಯ ಬಂದಿದ್ದನ್ನು ನಾವಂತೂ ಅವಹೇಳನ ಮಾಡುವುದಿಲ್ಲ ಎಂದು ಕಿಡಿ ಕಾರಿದೆ.

‘ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ? ಸೋಲಿನ ಭೀತಿಯಿಂದ ಹೊಸ್ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಚುನಾವಣಾ ಆಯೋಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತ್ತು.




Share this Story:

Follow Webdunia kannada

ಮುಂದಿನ ಸುದ್ದಿ

ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ: ಜಲಫಿರಂಗಿ ಪ್ರಯೋಗಿಸಿದ ಪೊಲೀಸರು