ಬೆಂಗಳೂರು: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಶೇ. 81.15 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 11 ಗಂಟೆಗೆ ವೆಬ್ ಸೈಟ್ ನಲ್ಲಿ ಅಧಿಕೃತವಾಗಿ ಫಲಿತಾಂಶ ಪ್ರಕಟವಾಗಲಿದೆ.
ಬೆಂಗಳೂರು ಶಿಕ್ಷಣ ಇಲಾಖೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದೆ. ದಕ್ಷಿಣ ಕನ್ನಡ ಜಿಲ್ಲೆ ಟಾಪರ್ ಆಗಿದ್ದು, ಉಡುಪಿ ಜಿಲ್ಲೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಗದಗ ಜಿಲ್ಲೆಗೆ ಕೊನೆಯ ಸ್ಥಾನ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.97 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಉಡುಪಿಯಲ್ಲಿ 96.80 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಒಟ್ಟು 6 ಲಕ್ಷದ 98 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಒಟ್ಟು 5,52,690 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 1,28,448, ವಿಜ್ಞಾನ ವಿಭಾಗದಲ್ಲಿ2,49,927, ವಾಣಿಜ್ಯ ವಿಭಾಗದಲ್ಲಿ 1,74, 315 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಕಲಾ ವಿಭಾಗದಲ್ಲಿ ಬೆಂಗಳೂರಿನ ಎನ್ಎಂಕೆಆರ್ ವಿ ಕಾಲೇಜಿನ ಮೇದಾ ಡಿ 596 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರು ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಧಾರವಾಡದ ವಿದ್ಯಾನಿಕೇತನ್ ಎಸ್ಇಪಿಯು ಕಾಲೇಜಿನ ಎ ವಿದ್ಯಾಲಕ್ಷ್ಮಿ 598 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.
ಫಲಿತಾಂಶ ವೀಕ್ಷಿಸಲು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಕಡ್ಡಾಯವಾಗಿರಬೇಕಾಗುತ್ತದೆ.
https://karresults.nic.in/ ಅಥವಾ
https://pue.kar.nic/ ಎಂಬ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಮುಖಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆ ಜೊತೆಗೆ ಯಾವ ವಿಭಾಗ ಎಂದು ಸೆಲೆಕ್ಟ್ ಮಾಡಬೇಕಾಗುತ್ತದೆ.