ಡೇಟಿಂಗ್ ಆ್ಯಪ್ ಎಂದು ಕರೆಯಲಾಗುವ ಲೊಕ್ಯಾಂಟೊ ಆ್ಯಪ್‌ನಲ್ಲಿ ಮಹಿಳೆಯರ ನಕಲಿ ಪೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮವಾಗಿ ಹಣ ಸಂಪಾದನೆಯಲ್ಲಿ ಮಾಡುತ್ತಿದ್ದ ಆರು ಮಂದಿ ದಂಧೆಕೋರರನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಸೆರೆಹಿಡಿದಿದ್ದಾರೆ.
ಗ್ರಾಹಕರು ನೀಡಿದ ದೂರು ಆಧರಿಸಿ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿದ್ದ ಮಂಜುನಾಥ್,ಮಲ್ಲಿಕಾರ್ಜುನಯ್ಯ, ಮಂಜುನಾಥ್, ಮೋಹನ್, ಹನುಮೇಶ್ ಮತ್ತು ರಾಜೇಶ್ ಎಂಬುವರನ್ನು ಬಂಧಿಸಲಾಗಿದೆ. ಹಲವು ವರ್ಷಗಳಿಂದ ವೇಶ್ಯಾವಾಟಿಕೆ ಜಾಲದಲ್ಲಿದ್ದ ಆರೋಪಿಗಳು ವ್ಯವಸ್ಥಿತ ಸಂಚು ರೂಪಿಸಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಡೇಟಿಂಗ್ ಆ್ಯಪ್ ಆಗಿರುವ ಲೋಕ್ಯಾಂಟೊ ಆ್ಯಪ್ ನಲ್ಲಿರುವ ಮಹಿಳೆ ಹಾಗೂ ಯುವತಿಯರ ಪ್ರೊಫೈಲ್ ಗಳಿಗೆ ಹೋಗಿ ಎಡಿಟ್ ಮಾಡಿದ ಸುಂದರವಾದ ಹುಡುಗಿಯರ ಪೋಟೋಗಳನ್ನು ಬಳಸಿ ಗ್ರಾಹಕರಿಗೆ ಕಳುಹಿಸುತ್ತಿದ್ದರು. ನಂತರ ಗ್ರಾಹಕರು ಹಾಗೂ ಅರೋಪಿಗಳು ಹಣಕಾಸು ವ್ಯವಹಾರ ಮಾಡುತ್ತಿದ್ದರು. ಮಾತುಕತೆಯಂತೆ ಗೊತ್ತುಪಡಿಸಿದ ಯುವತಿಯರನ್ನು ಕಳುಹಿಸದೆ ಬೇರೆ ಯುವತಿಯರನ್ನು ಕಳುಹಿಸುತ್ತಿದ್ದರು. ಗ್ರಾಹಕರು ಪ್ರಶ್ನಿದರೆ ಬೆದರಿಕೆ ಹಾಕಿ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವೇಶ್ಯವಾಟಿಕೆ ಜಾಲದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಆರೋಪಿಗಳು ಮಹಿಳೆಯರ ಫೇಕ್ ಕ್ರಿಯೆಟ್ ಹಾಗೂ ಸರ್ವೀಸ್ ನೀಡುವುದಕ್ಕೆ ಪ್ರತ್ಯೇಕ ತಂಡ ರಚಿಸಿ ಸಂಘಟಿತವಾಗಿ ಕೃತ್ಯದಲ್ಲಿ ಭಾಗಿಯಾಗುತ್ತಿದ್ದರು. ಸುದ್ದುಗುಂಟೆಪಾಳ್ಯ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ಹಲವು ಮಂದಿ ಗ್ರಾಹಕರನ್ನು ಹೆದರಿಸಿ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.