ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲದ ಕಿರುಕುಳಕ್ಕೆ ಬೇಸತ್ತ ಬಾಲಕನೊಬ್ಬ ಸಾಲ ತೀರಿಸಲು ಕಿಡ್ನಿ ಮಾರಲು ಪರ್ಮಿಷನ್ ಮಾಡಿ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ ಮನಕಲಕುವ ಘಟನೆ ನಡೆದಿದೆ.
ಕಿಡ್ನಿ ಮಾರಿಯಾದರೂ ಅಪ್ಪ ಅಮ್ಮನ ಸಾಲ ತೀರಿಸುತ್ತೇನೆ. ಇದಕ್ಕೆ ಸರ್ಕಾರ ಅನುಮತಿ ಮಾಡಿಕೊಡಬೇಕೆಂದು ಸರ್ಕಾರಕ್ಕೆ ಬಳಿ ಹೇಳಿಕೊಂಡಿದ್ದಾನೆ.
ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ಕೆಲ ಕುಟುಂಬಗಳು ಚಾಮರಾಜನಗರ ಜಿಲ್ಲೆಯ ಹಲವೆಡೆ ಊರನ್ನೇ ತೊರೆದು ಹೋದ ಘಟನೆಗಳು ನಡೆದಿದೆ. ಮಕ್ಕಳ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಗ್ರಾಮವನ್ನೇ ತೊರೆದಿದ್ದಾರೆ.
ನಮ್ಮಮ್ಮ ಚಾಪೆ ಹಾಸಿ ಸಾಲ ಕಟ್ಟು ಅಂತಾರೆ ಸಾರ್. ಕೈ ಮುಗಿದು ಕೇಳಿಕೊಳ್ತೀನಿ. ನನ್ನ ಒಂದು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ ಅಪ್ಪ-ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ. ಸರ್ಕಾರ ಪರ್ಮಿಷನ್ ಕೊಟ್ರೆ ನನ್ನ ಕಿಡ್ನಿ ಮಾರಿ ಸಾಲ ತೀರಿಸ್ತೀನಿ ಎಂದು ಬಾಲಕನೊಬ್ಬ ಮನವಿ ಮಾಡಿಕೊಂಡಿದ್ದಾನೆ.
ಬಾಲಕನ ಮನವಿಯಲ್ಲಿ ಹೀಗಿದೆ: ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಮನೆ ಬಾಗಿಲಿಗೆ ಬಂದು ಕೆಟ್ಟದಾಗಿ ಬೈತಾರೆ. ನಾವು ಸಾಯುತ್ತೇವೆ, ನೀವು ವಿದ್ಯಾಭ್ಯಾಸ ಮಾಡಿ ಎಂದು ಅಪ್ಪ ಅಮ್ಮ ಹೇಳುತ್ತಾರೆ. ಪೋಷಕರನ್ನು ಬಿಟ್ಟು ನಾವು ಹೇಗೆ ಬದುಕುವುದು. ನಾವೆಲ್ಲರು ಸಾಯ್ಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಚಾಮರಾಜನಗರ ತಾಲೂಕು ಹೆಗ್ಗವಾಡಿಪುರದ ಬಾಲಕ ಅಳಲು ತೋಡಿಕೊಂಡಿದ್ದಾನೆ.<>