ಬೆಂಗಳೂರು: ಕರ್ನಾಟಕದಲ್ಲಿ ಒಕ್ಕಲಿಗರನ್ನು ಎದುರು ಹಾಕಿಕೊಂಡರೆ ಎಷ್ಟು ಸರ್ಕಾರ ಬಿದ್ದಿವೆ ಎಂಬುದು ಚರಿತ್ರೆಯಿಂದ ತಿಳಿಯುತ್ತೆ ಎಂದು ಒಕ್ಕಲಿಗರ ಸಂಘದ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗ ಕೆಂಚಪ್ಪ ಗೌಡ ಹೇಳಿದ್ದಾರೆ.
ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗವೂ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ಹತ್ತು ವರ್ಷ ಆಗಿದೆ. ಜಾತಿಗಣತಿಗೆ ವರದಿ ಹಾಗೂ ಕ್ಯಾಬಿನೆಟ್‌ನಲ್ಲಿ ಸಲ್ಲಿಕೆ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ. ಇವರು ಮನೆ ಮನೆ ಸಮೀಕ್ಷೆ ಸರಿಯಾಗಿ ಮಾಡಿಲ್ಲ ಎಂದು ಆರೋಪಿಸಿದರು.
ಜಾತಿಗಣತಿ ಸಮೀಕ್ಷೆ ಲೋಪದೋಷದಿಂದ ಕೂಡಿದೆ. 5 ಕೋಟಿ 98 ಲಕ್ಷ ಜನ ಇದ್ದಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಿದ್ದಾರೆ. ಆದರೆ ಈಗ 7 ಕೋಟಿ ಜನಸಂಖ್ಯೆ ಇದೆ ಎಂದು ಮಾಧ್ಯಮದಲ್ಲಿ ಬರುತ್ತಿದೆ. 114 ಉಪಪಂಗಡಗಳು ನಮ್ಮಲ್ಲಿದೆ. ಆದರೆ ಇವುಗಳನ್ನು ಸರಿಯಾಗಿ ಪರಿಗಣಿಸಿಲ್ಲ ಎಂದು ಟೀಕಿಸಿದರು.
ಭಾನುವಾರ 12 ಗಂಟೆಗೆ ಬೆಂಗಳೂರು ಕಿಮ್ಸ್ ಆವರಣದಲ್ಲಿ ರಾಜ್ಯ ಒಕ್ಕಲಿಗರ ಸಂಘದಿಂದ ಸಮುದಾಯದ ಎಲ್ಲಾ ಶಾಸಕರು ಹಾಗೂ ಸಚಿವರ ಸಭೆ ನಡೆಯಲಿದೆ. ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಚಂದ್ರಶೇಖರನಾಥ ಸ್ವಾಮೀಜಿ ಹಾಗೂ ನಂಜಾವದೂತ ಸ್ವಾಮೀಜಿ ಕೂಡ ಭಾಗಿಯಾಗಲಿದ್ದಾರೆ. ಒಕ್ಕಲಿಗ ಸ್ವಾಮೀಜಿ, ಎಲ್ಲಾ ರಾಜಕೀಯ ಮುಖಂಡರು ಸೇರಿ ಸಭೆ ನಡೆಸಲಿದ್ದೇವೆ ಎಂದರು.
ಜಾತಿಗಣತಿ ಬಗ್ಗೆ ಸಿಎಂ ಪಟ್ಟು ಹಿಡಿದಿರಬಹುದು ಆದರೆ ನಮ್ಮ ನಾಯಕರ ಧ್ವನಿಯೂ ಮಂಕಾಗಿಲ್ಲ. ನಿರ್ಮಲಾನಂದ ಸ್ವಾಮೀಜಿ ಮುಖಂಡತ್ವದಲ್ಲಿ ಜ.12 ರಂದು ಸಭೆ ನಡೆಯಲಿದ್ದು, ಮಾಜಿ ಪ್ರಧಾನಿ ದೇವೇಗೌಡ, ಕುಮಾರಸ್ವಾಮಿ, ಶಿವಕುಮಾರ್, ಆರ್.ಅಶೋಕ್ ,ಅಶ್ಚಥ್ ನಾರಾಯಣ್ ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ವೀರಶೈವ ಮಹಾಸಭಾ ಕೂಡ ಒಟ್ಟಿಗೆ ಇದೆ. ಅವರ ಜೊತೆಯೂ ನಾವು ಮಾತಾನಾಡಿದ್ದೇವೆ. ಒಟ್ಟಾಗಿ ಹೋರಾಟ ಮಾಡುತ್ತೇವೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಆದರೆ ಈ ಸಮೀಕ್ಷೆ ನಡೆದು ಈಗ ಹತ್ತು ವರ್ಷ ಆಗಿದೆ. ಇದು ಕಾನೂನುಬಾಹಿರ ಎಂದರು.